ಬೆಂಗಳೂರು: ರಾಜ್ಯದ ಪ್ರಮುಖ ದಿನಪತ್ರಿಕೆಗಳ ಮುಖಪುಟದಲ್ಲಿ ನೀಡಿರುವ ಜಾಹೀರಾತಿನಲ್ಲಿ ಮಹಾತ್ಮ ಗಾಂಧೀಜಿಯವರಿಗೆ ಅವಹೇಳನ ಮಾಡಲಾಗಿದೆ ಹಾಗೂ ಅಹಿಂಸಾ ತತ್ವಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿ ಬಿಜೆಪಿ ವಿರುದ್ಧ ಆಪ್ ದೂರು ನೀಡಿದೆ.
ಆಮ್ ಆದ್ಮಿ ಪಕ್ಷವು ಶನಿವಾರ ವಿಧಾನಸಭಾ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರನ್ನು ದಾಖಲಿಸಿತು.
ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ಲೋಹಿತ್ ಹನುಮಾಪುರ ನೇತೃತ್ವದಲ್ಲಿ ದೂರು ನೀಡಲಾಗಿದೆ.
ದೂರಿನಲ್ಲಿ ಮಹಾತ್ಮ ಗಾಂಧೀಜಿ ಅವರು ನಮ್ಮ ದೇಶದ ರಾಷ್ಟ್ರಪಿತ ರಾಗಿದ್ದು ಅವರ ಅಹಿಂಸಾ ತತ್ವವೇ ಭಾರತದ ಸ್ವಾತಂತ್ರ್ಯ ಹೋರಾಟದ ಮೂಲ ತಿರುಳಾಗಿದೆ. ಅವರು ತಮ್ಮ ಜೀವನಪೂರ್ತಿ ಅಹಿಂಸೆಯ ಮೂಲಕವೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ನಾಯಕರು. ಅವರ ತತ್ವಗಳು ಇಂದಿಗೂ ದೇಶದಾದ್ಯಂತ ಅನುಸರಿಸಲ್ಪಟ್ಟಿವೆ, ಆದರೆ 6.2.2026ರಂದು ಬಿಜೆಪಿ ನೀಡಿರುವ ಹಲವಾರು ದಿನಪತ್ರಿಕೆಗಳ ಕಾರ್ಟೂನ್ ರೀತಿಯ ಜಾಹೀರಾತಿನಲ್ಲಿ ಮಹಾತ್ಮ ಗಾಂಧೀಜಿಯವರನ್ನು ಹಿಂಸಾತ್ಮಕವಾಗಿ ಮೂವರು ವ್ಯಕ್ತಿಗಳ ಮೇಲೆ ದಾಳಿ ನಡೆಸಿರುವಂತೆ ಚಿತ್ರಿಸಲಾಗಿದೆ ಎಂದು ದೂರಿದ್ದಾರೆ.
ಈ ರೀತಿಯ ಚಿತ್ರಣವು ಮಹಾತ್ಮ ಗಾಂಧೀಜಿಯವರ ಜೀವನ ಮೌಲ್ಯಗಳು ಅಹಿಂಸಾ ತತ್ವ ಮತ್ತು ಇತಿಹಾಸಕ್ಕೆ ಸಂಪೂರ್ಣ ವಿರುದ್ಧವಾಗಿದೆ, ಉದ್ದೇಶಪೂರ್ವಕವಾಗಿ ರಾಷ್ಟ್ರಪಿತನ ಗೌರವ ಹಾಗೂ ತತ್ವಗಳನ್ನು ಅವಮಾನಿಸುವ ನಿಟ್ಟಿನಲ್ಲಿ ಪ್ರಕಟವಾಗಿದೆ. ಬಿಜೆಪಿ ಜಾಹೀರಾತಿನ ಹೊಣೆಗಾರಿಕೆಯನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿರುವುದರಿಂದ ಈ ಕೃತ್ಯವು ಜಾಣ್ಮೆಯಿಂದ ಹಾಗೂ ದುರುದ್ದೇಶದಿಂದ ನಡೆದಿರುವುದು ಸ್ಪಷ್ಟವಾಗಿದೆ ಎಂದು ಆಪ್ ಆರೋಪಿಸಿದೆ.
ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 196, 299, 353 ಹಾಗೂ ರಾಷ್ಟ್ರೀಯ ಗೌರವ ಅವಮಾನ ತಡೆ ಕಾಯ್ದೆ ಅನುಸಾರ ಬಿಜೆಪಿಯ ಸಂಬಂಧಿಸಿದ ನಾಯಕರುಗಳ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಪ್ ಆಗ್ರಹಿಸಿದೆ.
ಠಾಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ , ಪ್ರಕಾಶ್ ನೆಡುಂಗಡಿ, ಲಕ್ಷ್ಮಿಕಾಂತ ರಾವ್,ಉಮೇಶ್ ಗೌಡ ಮತ್ತಿತರ ನಾಯಕರು ದೂರು ಸಲ್ಲಿಸಿದರು.
