ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ನಾಟಕೀಯ ಹಾಗೂ ಬೊಗಳೆ ಬಜೆಟ್ ಎಂದು ಆಮ್ ಆದ್ಮಿ ಪಕ್ಷ ಟೀಕಿಸಿದೆ.
ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು 2026-27ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ ಬಗ್ಗೆ ಹಲವಾರು ಅಂಶಗಳನ್ನು ಉಲ್ಲೇಖಿಸಿ ಇದೊಂದು ಜನತೆಗೆ ಕಣ್ಣೊರೆಸುವ ನಾಟಕದ ಬೊಗಳೆ ಬಜೆಟ್ ಎಂದು ಟೀಕಿಸಿದ್ದಾರೆ.
ಕರ್ನಾಟಕ ರಾಜ್ಯವನ್ನು 8 ಲಕ್ಷ ಕೋಟಿಯ ಸಾಲದ ವಿಷ ವರ್ತುಲದಲ್ಲಿ ಸಿಲುಕಿಸಿರುವ ಶ್ರೇಯಸ್ಸು ಈ ಕಾಂಗ್ರೆಸ್ ಸರ್ಕಾರಕ್ಕೆ ನೀಡಲೇ ಬೇಕಿದೆ. ಇಷ್ಟು ವರ್ಷಗಳ ಕಾಲ ಇಷ್ಟೊಂದು ಬೃಹತ್ ಮೊತ್ತದ ಸಾಲದ ಹಣ ಯಾವ ಯಾವ ಬಾಬತ್ತಿಗೆ ಖರ್ಚು ಮಾಡಿದೆ ಎಂಬುದರ ಬಗ್ಗೆ ಮುಖ್ಯಮಂತ್ರಿಗಳು ರಾಜ್ಯದ ಜನತೆಯ ಮುಂದೆ ಶ್ವೇತ ಪತ್ರವನ್ನು ಹೊರಡಿಸಬೇಕೆಂದು ಸವಾಲು ಹಾಕಿದರು.
ಈ ಸಾಲಿನಲ್ಲಿ ಮಾಡಿರುವ ಬೃಹತ್ ಸಾಲಕ್ಕೆ 46,000 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಬಡ್ಡಿ ಹಣವನ್ನು ಪಾವತಿಸಬೇಕಿದೆ. ಈ ಬಡ್ಡಿ ಹಣವನ್ನು ಸರಿದೂಗಿಸಲು ಸರ್ಕಾರ ಕರ್ನಾಟಕವನ್ನು ಕುಡುಕರ ರಾಜ್ಯ ವನ್ನಾಗಿ ಮಾಡಲು ಹೊರಟಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದು ಮುಖ್ಯ ಮಂತ್ರಿ ಚಂದ್ರು ಹೇಳಿದ್ದಾರೆ.
ಸರ್ಕಾರವು ಗಣಿಗಾರಿಕೆಗಳ ಲೈಸೆನ್ಸ್ ಗಾಗಿ 11,000 ಕೋಟಿ ರೂಪಾಯಿಗಳನ್ನು ನಿರೀಕ್ಷೆ ಮಾಡುತ್ತಿರುವುದನ್ನು ಗಮನಿಸಿದರೆ ರಾಜ್ಯದ ನೈಸರ್ಗಿಕ ಸಂಪತ್ತುಗಳನ್ನು ಪ್ರಭಾವಿಗಳು ಬೇಕಾಬಿಟ್ಟಿ ಲೂಟಿ ಮಾಡಲು ಭ್ರಷ್ಟ ಕಾಂಗ್ರೆಸ್ ಸರ್ಕಾರವೇ ರೆಡ್ ಕಾರ್ಪೆಟ್ ಹಾಕಿದಂತಿದೆ.
ಈಗಾಗಲೇ ಅಕ್ರಮ ಗಣಿಗಾರಿಕೆಯಿಂದ ದಂಡವನ್ನು ಹಾಕಿರುವ 20,000 ಕೋಟಿ ರೂಗಳನ್ನು ವಸೂಲಿಯೆ ಮಾಡಲು ಸಾಧ್ಯವಾಗಿಲ್ಲ.
ಮುಂಬರುವ ಉಪಚುನಾವಣೆಗಾಗಿ ಬಜೆಟ್ಟನ್ನು ದುರ್ಬಳಕೆ ಮಾಡಿಕೊಂಡು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ 100 ಕೋಟಿ ರೂಪಾಯಿಗಳ ಅನುದಾನ ಘೋಷಣೆ ಮಾಡಿರುವುದು ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವಿರೋಧಿ ಕೃತ್ಯ ಎಂದು ಆಪ್ ಹೇಳಿದೆ.
ಕೇವಲ ಮೈಸೂರು ಮತ್ತು ತುಮಕೂರಿನಲ್ಲಿ ಮಾತ್ರ ಸುಸಜ್ಜಿತ ಕ್ಯಾನ್ಸರ್ ಆಸ್ಪತ್ರೆಗಳ ನಿರ್ಮಾಣ ಮಾಡುವ ಘೋಷಣೆ ಮಾಡಿ ಉತ್ತರ ಕರ್ನಾಟಕವನ್ನು ಸಂಪೂರ್ಣ ಕೈ ಬಿಟ್ಟಿರುವುದು ಕಾಂಗ್ರೆಸ್ ಸರ್ಕಾರ ಉತ್ತರ ಕರ್ನಾಟಕ ವಿರೋಧಿ ಎಂಬುದನ್ನು ಎದ್ದು ತೋರಿಸುತ್ತದೆ.
4500 ಕೋಟಿ ರೂ.ಗಳ ಸಾರಿಗೆ ನೌಕರರ ಹಿಂಬಾಕಿ ವೇತನ ಇದ್ದರೆ ಸರ್ಕಾರ ಬಿಡುಗಡೆ ಮಾಡಿರುವುದು ಕೇವಲ 1250 ಕೋಟಿ. ರೂ ಮಾತ್ರ,ಸಾರಿಗೆ ನೌಕರರು ಸಂಪೂರ್ಣ ಜೀತದಾಳು ಪದ್ಧತಿಯಲ್ಲಿ ದುಡಿಯುತ್ತಿದ್ದು, ಇದು ಖಂಡಿತ ಮಾನವ ವಿರೋಧಿ ಕೃತ್ಯವಾಗಿದೆ ಎಂದು ಟೀಕಿಸಿದ್ದಾರೆ.
4500 ಎಲೆಕ್ಟ್ರಿಕಲ್ ಬಸ್ ಗಳ ಖರೀದಿಯ ಮೂಲಕ ಬೃಹತ್ ಸಾರಿಗೆ ದಂದೆಗೆ ಇಳಿದಿರುವುದು ಸರ್ಕಾರದ ಹಗಲುದರೋಡೆ ನೀತಿಗೆ ಸಾಕ್ಷಿಯಾಗಿದೆ.
ಈಗಾಗಲೇ ಉಚಿತ ಸಾರಿಗೆ ಯೋಜನೆಗೆ 4500 ಕೋಟಿ ರೂಗಳ ಬಾಕಿ ಇದ್ದರೆ ಈ ಬಜೆಟ್ ನಲ್ಲಿ ಕೇವಲ 5500 ಕೋಟಿ ರೂ.ಗಳನ್ನು ಘೋಷಿಸಿದ್ದಾರೆ. ಬಾಕಿಯನ್ನು ನೀಡಿದ್ದಾರೆಯೇ ಹೊರತು ಮುಂದಿನ ವರ್ಷಕ್ಕೆ ಬೇಕಾಗುವ ಉಚಿತ ಸಾರಿಗೆ ಯೋಜನೆಯ ಹಣವನ್ನು ಬಿಡುಗಡೆ ಮಾಡಿಲ್ಲ.
ಕೇವಲ ಕಾರವಾರದಲ್ಲಿ ಮಾತ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಇರುವ ಇನ್ನಿತರ ನಗರಗಳಿಗೆ ಯಾವುದೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಘೋಷಣೆ ಆಗಿಲ್ಲ.
ಸರ್ಕಾರಿ ಆಸ್ಪತ್ರೆಗಳ ಟ್ರಾಮಾ ಕೇರ್ ಸೆಂಟರ್ ಗೆ ಕೇವಲ 10 ಕೋಟಿ ಬಿಡುಗಡೆ ಮಾಡಿರುವುದು ನಿಜಕ್ಕೂ ಹಾಸ್ಯಾಸ್ಪದವಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ದೆಹಲಿ ಮಾದರಿಯ ಮೊಹಲ್ಲ ಕ್ಲಿನಿಕ್ ಗಳ ಪ್ರಸ್ತಾವನೆಯೇ ಇಲ್ಲದೆ ರಾಜ್ಯದ ಬಡರೋಗಿಗಳಿಗೆ ಪ್ರಾಥಮಿಕ ಆರೋಗ್ಯ ವ್ಯವಸ್ಥೆ ಇಲ್ಲದಾಗಿದೆ.
ಉಪನಗರ ರೈಲು ಯೋಜನೆಗೆ ಬಿಡುಗಡೆ ಮಾಡಿರುವ ಚಿಲ್ಲರೆ ಕಾಸಿನ ಹಣವನ್ನು ಗಮನಿಸಿದರೆ ಇನ್ನೂ 15 ವರ್ಷ ಆದರೂ ಸಹ ಈ ಯೋಜನೆಯನ್ನು ಮುಗಿಸುವ ಲಕ್ಷಣ ಕಾಣುತ್ತಿಲ್ಲ.
ಈಗಾಗಲೇ ಬೆಳಗಾವಿ ,ಮೈಸೂರು, ಕಲ್ಬುರ್ಗಿ, ಶಿವಮೊಗ್ಗ ದಂತಹ ನಗರಗಳಲ್ಲಿ ವಿಮಾನ ನಿಲ್ದಾಣವಿದ್ದರೂ ಸಹ ತಮ್ಮ ತೆವಲು ತೀರಿಸಿಕೊಳ್ಳಲು ಮತ್ತಷ್ಟು ಹೊಸ ವಿಮಾನ ನಿಲ್ದಾಣಗಳಿಗೆ ಕೋಟ್ಯಾಂತರ ಹಣ ಬಿಡುಗಡೆ ಮಾಡಿರುವುದು ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ. ಬಿಡುಗಡೆ ಮಾಡಿರುವ ಹಣವನ್ನು ರಾಜ್ಯದ ವಿಮಾನ ನಿಲ್ದಾಣಗಳು ಇರುವ ನಗರಗಳಿಗೆ ಸಣ್ಣ ಸಣ್ಣ ವಿಮಾನಗಳನ್ನು ಅಳವಡಿಸುವ ಮೂಲಕ ರಾಜ್ಯದ ನಗರಗಳ ಸಂಪರ್ಕ ಜಾಲವನ್ನು ವೃದ್ಧಿಸಬಹುದಿತ್ತು.
ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಯುವ ನಿಧಿ ಯೋಜನೆಗೆ ಈ ಬಜೆಟ್ ನಲ್ಲಿ ಬಿಡಿಗಾಸನ್ನು ಇಟ್ಟಿಲ್ಲ. ಭ್ರಷ್ಟ ಕಾಂಗ್ರೆಸ್ ಸರ್ಕಾರ ರಾಜ್ಯದ ಪ್ರತಿಭಾವಂತ ಪದವೀಧರ ನಿರುದ್ಯೋಗಿಗಳಿಗೆ ನೀಡುತ್ತಿರುವ ಬೃಹತ್ ಕೊಡುಗೆ ಇದು.
ಈಗಾಗಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಐದು ನಗರ ಪಾಲಿಕೆಗಳಾಗಿ ವಿಭಜಿಸಿ ಇವುಗಳಿಗಾಗಿ ಕೇವಲ 1,125 ಕೋಟಿ ರೂಗಳನ್ನು ಬಿಡುಗಡೆ ಮಾಡಿದ್ದಾರೆ. ಇದು ಯಾವ ಬೆಂಗಳೂರು ಅಭಿವೃದ್ಧಿ ಮಾಡಲು ಸಾಧ್ಯ. ಪದೇ ಪದೇ ಮುಖ್ಯಮಂತ್ರಿಗಳ ಮುಂದೆ ಭಿಕ್ಷೆ ಬೇಡುವ ಪರಿಸ್ಥಿತಿಗೆ ತಂದಿದ್ದಾರೆ. ಈ ಮೂಲಕ ಬೆಂಗಳೂರಿನ ಸ್ಥಳೀಯ ಸಂಸ್ಥೆಯ ಆಡಳಿತಕ್ಕೆ ಕೊಡಲಿ ಪೆಟ್ಟು ನೀಡಿ ಸಂವಿಧಾನದತ್ತ ಅಧಿಕಾರ ವಿಕೇಂದ್ರೀಕರಣಕ್ಕೆ ಸಂಪೂರ್ಣ ಎಳ್ಳುನೀರು ಬಿಟ್ಟಿದ್ದಾರೆ.
ಈಗಾಗಲೇ ಕಾವೇರಿ ಐದನೇ ಹಂತದ ಯೋಜನೆ ಮುಗಿದು ಶೇಕಡಾವಾರು 50ರಷ್ಟು ಸಹ ನಾಗರಿಕರು ಸಂಪರ್ಕವನ್ನು ತೆಗೆದುಕೊಳ್ಳಲು ಇವರ ದುಬಾರಿ ವೆಚ್ಚದಿಂದ ಅಸಾಧ್ಯವಾಗಿದೆ. ಜಲ ಮಂಡಳಿಯ ಮೂಲಕ ಮತ್ತಷ್ಟು ಸಾವಿರಾರು ಕೋಟಿ. ರೂ ಕೊಳ್ಳೆಹೊಡೆಯಲು 6ನೇ ಹಂತದ ಯೋಜನೆಗೆ ಹಣ ಬಿಡುಗಡೆ ಮಾಡಿರುವುದು ತೆರಿಗೆದಾದ ಹಣವನ್ನು ದರೋಡೆ ಮಾಡುವ ಸಂಚು ಎಂದರೆ ತಪ್ಪಾಗುವುದಿಲ್ಲ ಎಂದು ಚಂದ್ರು ಹೇಳಿದ್ದಾರೆ.
ಬೆಂಗಳೂರು ನಗರದಲ್ಲಿ 450
ಕಿ. ಮೀ ರಸ್ತೆಗಳಿಗೆ ವೈಟ್ ಟ್ಯಾಪಿಂಗ್ ಗಾಗಿ 3000 ಕೋಟಿ ಬಿಡುಗಡೆ ಮಾಡಿರುವುದು ತೆರಿಗೆದಾರರ ಹಣವನ್ನು ಸಂಪೂರ್ಣ ಲೂಟಿ ಮಾಡಲು ಎಷ್ಟು ಕಾತರರಾಗಿದ್ದಾರೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಮುಖ್ಯ ಮಂತ್ರಿ ಚಂದ್ರು ತಿಳಿಸಿದ್ದಾರೆ.
