ಮೈಸೂರು: ಕೋವಿಡ್-19 ಸಾಂಕ್ರಾಮಿಕದ ಬಳಿಕ ತಮ್ಮ ಮಕ್ಕಳೊಂದಿಗೆ ಮತ್ತೆ ಒಂದಾಗಿರುವುದಕ್ಕೆ ಸಂತಸವಾಗುತ್ತಿದೆ ಎಂದು ವಿಶ್ವಪ್ರಸಿದ್ಧ ಮಾನವತಾವಾದಿ ಹಾಗೂ ಆಧ್ಯಾತ್ಮಿಕ ಗುರು ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ಹೇಳಿದರು.
ಮೈಸೂರಿನ ಬೋಗಾದಿ ಎರಡನೇ ಹಂತದಲ್ಲಿರುವ ಮಾತಾ ಅಮೃತಾನಂದಮಯಿ ಮಠದಲ್ಲಿ ನಡೆದ ಬ್ರಹ್ಮಸ್ಥಾನ ಮಹೋತ್ಸವದಲ್ಲಿ ಮಾತನಾಡಿದ ಅಮ್ಮ, ಕೋವಿಡ್ ಮತ್ತು ಇತರ ವಿಪತ್ತುಗಳಿಂದ ಮಾನವಕುಲ ಕಲಿಯಬೇಕಾದ ಪಾಠಗಳನ್ನು ವಿವರಿಸಿದರು.
ಜನರು ಮತ್ತು ರಾಷ್ಟ್ರಗಳ ನಡುವಿನ ಸಂಘರ್ಷಗಳನ್ನು ಮಾತುಕತೆ ಮೂಲಕ ಬಗೆಹರಿಸಬಹುದಾದರೂ, ಪ್ರಕೃತಿಯೊಂದಿಗಿನ ಸಂಬಂಧಕ್ಕೆ ವಿನಯ, ಪ್ರೇಮ ಮತ್ತು ಗೌರವ ಅಗತ್ಯ. ಭೂಮಿ ಮತ್ತು ಅದರ ಸಂಪನ್ಮೂಲಗಳನ್ನು ಎಲ್ಲ ಜೀವಿಗಳೊಂದಿಗೆ ಜವಾಬ್ದಾರಿಯುತವಾಗಿ ಹಂಚಿಕೊಳ್ಳಬೇಕು. ವಿಶ್ವವ್ಯಾಪಿ ಕರುಣೆ ಮತ್ತು ಸಮಾನ ದೃಷ್ಟಿಕೋನದಿಂದ ಶಾಂತಿಯುತ ಜಗತ್ತನ್ನು ನಿರ್ಮಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅಮೃತಕೃಪಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನೂತನ 100 ಹಾಸಿಗೆಗಳ ಬ್ಲಾಕ್ ಅನ್ನು ಡಿಜಿಟಲ್ ಮೂಲಕ ಉದ್ಘಾಟಿಸಿ ಮಾತನಾಡಿದ ಖ್ಯಾತ ಹೃದ್ರೋಗ ತಜ್ಞರು, ಪದ್ಮಶ್ರೀ ಪುರಸ್ಕೃತರು ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾದ ಡಾ. ಸಿ.ಎನ್. ಮಂಜುನಾಥ್ ಅವರು, ಕಾಡುವ ಕೈಗಳಿಗಿಂತ ಕಾಪಾಡುವ ಕೈಗಳ ಶಕ್ತಿ ದೊಡ್ಡದು ಎಂದು ಹೇಳಿದರು.
ಅಮ್ಮನ ಜೀವನ ಮತ್ತು ಮಾನವೀಯ ಸೇವಾ ಕಾರ್ಯಗಳನ್ನು ಶ್ಲಾಘಿಸಿದ ಅವರು, ಅಮ್ಮ ಮಾನವಕುಲಕ್ಕೆ ಮಾರ್ಗದರ್ಶನ ನೀಡುವ ದೈವಿಕ ರಾಯಭಾರಿ. ಒಂದು ಸಣ್ಣ ಹಳ್ಳಿಯಿಂದ ಜಾಗತಿಕ ಆಧ್ಯಾತ್ಮಿಕತೆಯ ಪ್ರತೀಕವಾಗಿ ಬೆಳೆದ ಅವರ ಪಯಣ ಸೇವೆಯ ಮಹತ್ವವನ್ನು ಸಾರುತ್ತದೆ ಎಂದು ಹೇಳಿದರು.
ಸಾಕ್ಷರತೆಯೊಂದಿಗೆ ಮೌಲ್ಯಗಳು ಮತ್ತು ಸಂಸ್ಕಾರ ಬೆರೆತಾಗ ಮಾತ್ರ ಸಮಗ್ರ ಸಮಾಜದ ಅಭಿವೃದ್ಧಿ ಸಾಧ್ಯ. ಬಡವರು ಮತ್ತು ಮಧ್ಯಮ ವರ್ಗದವರಿಗೆ ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ನೀಡುವ ಅಮ್ಮನ ಪ್ರಯತ್ನ ಶ್ಲಾಘನೀಯ ಎಂದು ತಿಳಿಸಿದರು.
ಯುವಜನರು ಜವಾಬ್ದಾರಿಯುತವಾಗಿ ಮಾತನಾಡಬೇಕು, ಆರೋಗ್ಯಕರ ಸಂಬಂಧ ಬೆಳೆಸಿಕೊಳ್ಳಬೇಕು, ಯೋಗ ಮತ್ತು ವ್ಯಾಯಾಮ ಅಭ್ಯಾಸ ಮಾಡಬೇಕು ಎಂದು ಡಾ.ಮಂಜುನಾಥ್ ಸಲಹೆ ನೀಡಿದರು.
ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಬಡವರಿಗೆ ವಸತಿ ಒದಗಿಸುವುದು, ಕಾರಾಗೃಹದ ಕೈದಿಗಳು ಸೇರಿದಂತೆ ಸಮಾಜದ ಎಲ್ಲ ವರ್ಗದವರಿಗೆ ಯೋಗ ಮತ್ತು ಆಧ್ಯಾತ್ಮಿಕ ಬೋಧನೆ ಪರಿಚಯಿಸುವುದು ಸೇರಿದಂತೆ ಅಮ್ಮನ ಸೇವಾ ಕಾರ್ಯಗಳು ಅನುಕರಣೀಯ. ತಮ್ಮ ಕ್ಷೇತ್ರದಲ್ಲಿ ನೂತನ ಆಸ್ಪತ್ರೆ ಬ್ಲಾಕ್ ಉದ್ಘಾಟನೆಯಾಗಿರುವುದು ಸಂತಸ ತಂದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆ.ಆರ್. ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ, ಮೈಸೂರು ವಿವಿ ಮಾಜಿ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್, ಹಿರಿಯ ವಕೀಲ ಓ. ಶ್ಯಾಮ ಭಟ್, ಅರುಬಾದ ಕ್ಸೇವಿಯರ್ ಯೂನಿವರ್ಸಿಟಿಯ ಹೃದ್ರೋಗ ಅರಿವಳಿಕೆ ತಜ್ಞ ಡಾ. ಪಿ.ಕೆ. ಪ್ರಹ್ಲಾದ್, ಬ್ಯಾಂಕ್ ನೋಟ್ ಪೇಪರ್ ಮಿಲ್ ಎಂಡಿ ಅನಂತ್ ಹೆಗ್ಡೆ, ಆಟೋಮೋಟಿವ್ ಆಕ್ಸಲ್ಸ್ ಅಧ್ಯಕ್ಷ ನಾಗರಾಜ್ ಗಾರ್ಗೇಶ್ವರಿ, ಕೊಚ್ಚಿಯ ಅಮೃತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಗಿರೀಶ್ ಕುಮಾರ್ ಕೆ.ಎಸ್. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
