ಬೆಳಗಾವಿ: ಕಬ್ಬು ಬೆಳೆಯುವ ರೈತರು ಪ್ರತಿಭಟನೆ ನಡೆಸುವುದು ಬೇಡ ನಮ್ಮ ಸರ್ಕಾರ ರೈತರ ಪರವಾಗಿದೆ ಎಂದು ಮುಖ್ಯ ಮಂತ್ರಿ ಡಿ ಕೆ ಶಿವಕುಮಾರ್ ದೃಢ ವಾಗಿ ಹೇಳಿದ್ದಾರೆ.
ಅವರು ಕಬ್ಬು ಬೆಳೆಗಾರರ ಬೇಡಿಕೆ ವಿಚಾರವಾಗಿ ಬೆಳಗಾವಿಯ ಸುವರ್ಣಸೌಧದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸೋಮವಾರ ಸಭೆ ನಡೆಸಿದರು.
ನಂತರ ಕಬ್ಬು ಬೆಳೆಗಾರರೊಂದಿಗೂ ಮಾತುಕತೆ ನಡೆಸಿದರು,ಆದರೆ ಇಂದಿನ ಸಭೆ ಫಲಪ್ರದವಾದಂತೆ ಕಾಣಲಿಲ್ಲ.
ಕಬ್ಬು ಬೆಳೆಗಾರತು 48 ಗಂಟೆ ಕಾಲ ಸರ್ಕಾರಕ್ಕೆ ಟೈಮ್ ಕೊಟ್ಟಿದ್ದು,ತಮ್ಮ ಬೇಡಿಕೆ ಈಡೇರದಿದ್ದರೆ ಕರ್ನಾಟ ಬಂದ್ ಮಾಡುವುದು ಶತಃಸಿದ್ದ ಎಂದು ಎಚ್ಚರಿಸಿದ್ದಾರೆ.
ಸರ್ಕಾರ ಸ್ವಲ್ಪ ಹಣ ನೀಡುವುದು. ಉಳಿದದ್ದನ್ನು ಸಕ್ಕರೆ ಕಾರ್ಖಾನೆ ಮಾಲೀಕರು ನೀಡುವುದು ಎಂದು ಈ ಹಿಂದೆ ತೀರ್ಮಾನ ಆಗಿತ್ತು.
80% ಕಾರ್ಖಾನೆಗಳು ಅದನ್ನು ಪಾಲಿಸಿವೆ. ಕೆಲವರು ತೀರ್ಮಾನ ಪಾಲಿಸಿಲ್ಲ. ಅವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರೈತರನ್ನು ವಿಶ್ವಾಸಕ್ಕೆ ಪಡೆಯುವಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ಸಫಲರಾಗಿಲ್ಲ.
ರೈತರು, ಮಾಲೀಕರ ರಕ್ಷಣೆ ಮಾಡಬೇಕಾದ ಜವಾಬ್ದಾರಿ ಸರ್ಕಾರಗಳ ಮೇಲಿದೆ ಎಂದು ಸಿಎಂ ಹೇಳಿದ್ದಾರೆ.
ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಬಿಹಾರ, ಉತ್ತರ ಪ್ರದೇಶ ಸೇರಿದಂತೆ ಬೇರೆ ರಾಜ್ಯಗಳಲ್ಲೂ ಈ ಸಮಸ್ಯೆ ಕಾಡುತ್ತಿದೆ.10 ವರ್ಷಗಳಿಂದ ಸಕ್ಕರೆ ಬೆಲೆ ಏರಿಕೆ ಆಗಿಲ್ಲ,ಕೇಂದ್ರ ಸಚಿವರು ನಮ್ಮ ರಾಜ್ಯದವರೇ ಆಗಿದ್ದು, ಅವರು ತಮ್ಮದೇ ಆದ ಪ್ರಯತ್ನ ಮಾಡುತ್ತಿದ್ದಾರೆ.ರೈತರ ಪ್ರತಿಭಟನೆ ಸಮಯದಲ್ಲಿ ಅವರನ್ನು ನಾನು, ಜಿಲ್ಲಾ ಮಂತ್ರಿಗಳು ಹಾಗೂ ಶಾಸಕರು ಕಿತ್ತೂರಿನಲ್ಲಿ ಭೇಟಿ ಮಾಡಿ ಅವರ ಅಹವಾಲು ಆಲಿಸಿದ್ದೇವೆ ಎಂದು ತಿಳಿಸಿದರು.
10 ವರ್ಷಗಳಿಂದ ಬೆಲೆ ಏರಿಕೆ ಆಗಿಲ್ಲ. ಇದರಿಂದ ರೈತರಿಗೆ ನಷ್ಟ ಹೆಚ್ಚಾಗಿದೆ. ಹೀಗಾಗಿ ಪ್ರತಿ ಟನ್ ಕಬ್ಬಿಗೆ 6 ಸಾವಿರವರೆಗೂ ಬೆಲೆ ನಿಗದಿ ಮಾಡಿ ಪರಿಹಾರ ನೀಡಿ ಎಂದು ರೈತರು ಬೇಡಿಕೆ ಇಟ್ಟಿದ್ದಾರೆ.
ಇದಕ್ಕೆ ಪರಿಹಾರ ನೀಡಬೇಕಾಗಿರುವುದು ಸಕ್ಕರೆ ಕಾರ್ಖಾನೆಗಳ ಮಾಲೀಕರು ಮತ್ತು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ.
ರಾಜ್ಯದಲ್ಲಿ ಶಾಂತಿ ಕಾಪಾಡುವುದು ನಮ್ಮ ಕರ್ತವ್ಯ.
ನಾವು ಯಾರ ಪರವೂ ಇಲ್ಲ. ಕಾರ್ಖಾನೆ ಇಲ್ಲವಾದರೆ ರೈತರಿಗೆ ತೊಂದರೆ. ರೈತರಿಲ್ಲ ಎಂದರೆ ಕಾರ್ಖಾನೆಗಳಿಗೆ ತೊಂದರೆ. ಹೀಗಾಗಿ ಎಲ್ಲರ ರಕ್ಷಣೆ ಮಾಡಬೇಕು ಎಂದು ಹೇಳಿದರು.
ನಿಮಗೇ ಗೊತ್ತಿದೆ ರಾಜ್ಯದಲ್ಲಿ ಮಳೆ ಇಲ್ಲದೆ ಭೀಕರ ಬರ ಕಾಡುತ್ತಿದೆ,ಖಜಾನೆಯಲ್ಲಿ ಹಣ ಇಲ್ಲ,ದಯವಿಟ್ಟು ಸಹಕರಿಸಿ,ತಾಳ್ಮೆ ಇರಲಿ ಎಂದು ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.
ಸಕ್ಕರೆ ಉತ್ಪಾದನೆ ಕುಸಿದಿದೆ. ಇಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸಮಸ್ಯೆಗಳಿವೆ.
ನಾನು ಮಹಾರಾಷ್ಟ್ರ ಸಿಎಂ ಜತೆಗೂ ಚರ್ಚೆ ಮಾಡಿದ್ದು, ಈ ವಿಚಾರ ಬಗೆಹರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮಣ್ ಸವದಿ, ಚಲುವರಾಯಸ್ವಾಮಿ, ಎಂ ಬಿ ಪಾಟೀಲ್, ಸಂತೋಷ್ ಲಾಡ್, ರುದ್ರಪ್ಪ ಲಮಾಣಿ, ಎಸ್ ಎಸ್ ಮಲ್ಲಿಕಾರ್ಜುನ್, ವಿಜಯಾನಂದ್ ಕಾಶಪ್ಪನವರ್, ಸಂಸದೆ ಪ್ರಿಯಾಂಕ ಜಾರಕಿಹೊಳಿ, ಸಿಎಂ ಆರ್ಥಿಕ ಸಲಹೆಗಾರ ಎಲ್ ಕೆ ಅತೀಕ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ತುಷಾರ್ ಗಿರಿನಾಥ್, ಗೌರವ್ ಗುಪ್ತಾ, ರಿತೇಶ್ ಕುಮಾರ್ ಸಿಂಗ್, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಕಬ್ಬು ಬೆಳೆಯುವ ಜಿಲ್ಲೆಗಳ ಜನಪ್ರತಿನಿಧಿಗಳು, ಕಾರ್ಖಾನೆಗಳ ಮಾಲೀಕರು, ಸರ್ಕಾರದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
