ಬೆಂಗಳೂರು: ಕ್ರೀಡಾ ತರಬೇತುದಾರರಿಗೆ ಕೃತಜ್ಞತೆ ಸಲ್ಲಿಸುವುದು ಕ್ರೀಡಾಪಟುಗಳ ಕರ್ತವ್ಯ ಎಂದು ಭಾರತ ಸರ್ಕಾರದ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿಯ (ICCR) ಸದಸ್ಯರಾದ ಡಾ. ಜಾನಪದ ಎಸ್. ಬಾಲಾಜಿ ಹೇಳಿದರು.
ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಮಾರ್ಗದರ್ಶನ ನೀಡಿ, ಕ್ರೀಡಾಪಟುಗಳ ಯಶಸ್ಸಿಗೆ ಶ್ರಮಿಸಿದ ತರಬೇತುದಾರರಿಗೆ ಕೃತಜ್ಞತೆ ಸಲ್ಲಿಸುವುದು ಪ್ರತಿಯೊಬ್ಬ ಕ್ರೀಡಾಪಟುವಿನ ಕರ್ತವ್ಯ ಎಂದು ನುಡಿದರು.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಹಿರಿಯ ಕ್ರೀಡಾಪಟುಗಳು ಆಯೋಜಿಸಿದ್ದ ಕ್ರೀಡಾ ತರಬೇತುದಾರರಿಗೆ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾವು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ನೆರವಾದ ತರಬೇತುದಾರರನ್ನು ಸ್ಮರಿಸಿ, ಅವರಿಗೆ ಗೌರವ ಸಮರ್ಪಿಸುತ್ತಿರುವ ಹಿರಿಯ ಕ್ರೀಡಾಪಟುಗಳ ಕಾರ್ಯ ಶ್ಲಾಘನೀಯವಾಗಿದೆ. ಇಂತಹ ಕಾರ್ಯಕ್ರಮಗಳು ಇಂದಿನ ಯುವ ಕ್ರೀಡಾಪಟುಗಳಿಗೆ ಮಾದರಿಯಾಗಿದ್ದು, ಗುರುಗಳ ಮೇಲಿನ ಗೌರವ ಮತ್ತು ಕೃತಜ್ಞತೆಯ ಮನೋಭಾವವನ್ನು ಬೆಳೆಸುತ್ತವೆ ಎಂದು ತಿಳಿಸಿದರು.
ವಿದ್ಯಾನಗರದ ಕ್ರೀಡಾ ಶಾಲೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಕ್ರೀಡಾಪಟುಗಳ ಪರವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಜಾನಪದ ಬಾಲಾಜಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕ್ರೀಡಾ ತರಬೇತುದಾರ ಪ್ರಭು ಅವರು, ಇತ್ತೀಚಿನ ದಿನಗಳಲ್ಲಿ ತಮ್ಮನ್ನು ಬೆಳೆಸಿದ ತರಬೇತುದಾರರನ್ನು ಗುರುತಿಸಿ ಗೌರವಿಸುವ ಇಂತಹ ಕ್ರೀಡಾಪಟುಗಳನ್ನು ಕಾಣುವುದು ಅಪರೂಪವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರತಿಭಾವಂತ ಕ್ರೀಡಾಪಟುಗಳು ಹೊರಹೊಮ್ಮಿ ಕ್ರೀಡಾ ಕ್ಷೇತ್ರದಲ್ಲಿ ದೇಶಕ್ಕೆ ಕೀರ್ತಿ ತರಲಿ ಎಂದು ಆಶಿಸಿದರು.
ಬ್ಯಾಸ್ಕೆಟ್ಬಾಲ್ ಕ್ರೀಡಾ ತರಬೇತುದಾರ ಗಿರೀಶ್ ಮಾತನಾಡಿ, ಕ್ರೀಡೆಯು ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬರೂ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಕ್ರೀಡಾಪಟುಗಳಾದ ರಾಧಾ ಎಂ., ಗಿರೀಶ್, ದಿವ್ಯಪ್ರಸಾದ್, ಫಾರಿದ್, ಬಾಬು ಹಾಗೂ ಜಯಂತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
