ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಇಂದು ಭಕ್ತಸಾಗರದ ಸಮ್ಮುಖದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ರಥೋತ್ಸವ ಅದ್ದೂರಿಯಾಗಿ ಜರುಗಿತು.
ಇಂದು ಬೆಳಗ್ಗೆಯಿಂದಲೇ ಚಾಮುಂಡಿ ಬೆಟ್ಟದಲ್ಲಿ ದಟ್ಟ ಮಂಜು ಮತ್ತು ತುಂತುರು ಮಳೆ ಆವರಿಸಿತ್ತು,ಆದರೂ ಮಳೆ-ಮಂಜಿನ ನಡುವೆಯೂ ಸಾವಿರಾರು ಭಕ್ತರು ಬೆಟ್ಟಕ್ಕೆ ಆಗಮಿಸಿ ರಥೋತ್ಸವದಲ್ಲಿ ಭಾಗಿಯಾದರು.
ಹೂವು, ಬಣ್ಣದ ಬಾವುಟಗಳಿಂದ ಸಿಂಗರಿಸಿದ್ದ ರಥ ದೇವಸ್ಥಾನದ ನೂರಾರು ಅಡಿ ಎತ್ತರದ ಗೋಪುರದ ಹಿನ್ನೆಲೆಯಲ್ಲಿ ಕಣ್ಮನ ಸೆಳೆಯಿತು.
ಚಾಮುಂಡೇಶ್ವರಿ ದೇವಿಯ ರಥೋತ್ಸವಕ್ಕೆ
ರಾಜಮಾತೆ ಪ್ರಮೋದಾ ದೇವಿ ಒಡೆಯರ್, ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮಹಾರಾಣಿ ತ್ರಿಷಿಕಾ ಕುಮಾರಿ ಒಡೆಯರ್ ಸೇರಿದಂತೆ ರಾಜವಂಶಸ್ಥರು ರಥಕ್ಕೆ ಪೂಜೆ ಸಲ್ಲಿಸಿ ರಥ ಎಳೆದರು.
ಇದರ ಜೊತೆಗೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.
ದಸರಾದ ಕೊನೆಯ ಪ್ರಮುಖ ಧಾರ್ಮಿಕ ಕಾರ್ಯಕ್ರಮ ಇದಾಗಿದ್ದು, ಆಶ್ವಯುಜ ಮಾಸದಲ್ಲಿ ಪ್ರತಿ ವರ್ಷ ಈ ರಥೋತ್ಸವ ನಡೆಯುತ್ತದೆ.
ರಥೋತ್ಸವದ ಪ್ರಯುಕ್ತ ಅಮ್ಮನವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ರಥೋತ್ಸವದ ವೇಳೆ ಪೊಲೀಸ್ ಬ್ಯಾಂಡ್ ತಂಡದಿಂದ ಆಕರ್ಷಕ ವಾದ್ಯ ಪ್ರದರ್ಶನ ನಡೆಯಿತು.
ರಥೋತ್ಸವ ವೇಳೆ ಪೊಲೀಸರು ಸಿಡಿಮದ್ದು ಸಿಡಿಸಿದರು.
ಮಳೆ-ಮಂಜಿನ ನಡುವೆಯೂ ಭಕ್ತರು ಮೊಬೈಲ್ ನಲ್ಲಿ ರಥದ ಫೋಟೋ, ವಿಡಿಯೋ ಸೆರೆಹಿಡಿದು “ಜೈ ಚಾಮುಂಡೇಶ್ವರಿ” ಘೋಷಣೆ ಕೂಗಿ ಸಂಭ್ರಮಿಸಿ ಪುನೀತರಾದರು.
ರಥೋತ್ಸವದ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ಭಾರೀ ಪೊಲೀಸ್ ಭದ್ರತೆ ಮಾಡಲಾಗಿತ್ತು.
