ಮೈಸೂರು: ಜಟ್ಟಿ ಕಾಳಗ ನಿಲ್ಲಲು ಯಾರು ಕಾರಣ, ಆ ಸಮಯದಲ್ಲಿ ಏನಾಯ್ತು ಎಂದು ವರದಿ ಕೇಳಿದ್ದೇನೆ ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ತಿಳಿಸಿದರು.
ಚಾಮುಂಡಿ ಬೆಟ್ಟದಲ್ಲಿ ರಥೋತ್ಸವದ ಬಳಿಕ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ
ನಾವು ಮುಹೂರ್ತ ಮೀರಿ ಏನನ್ನೂ ಮಾಡುವುದಿಲ್ಲ,ಹಾಗಾಗಿ ಜಟ್ಟಿ ಕಾಳಗಕ್ಕೂ ಮೊದಲೇ ವಿಜಯ ಯಾತ್ರೆ ಹೋಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಅಂಬಾರಿ ಆನೆ ಪ್ರಶಾಂತ ಬಗ್ಗೆ ಮಾತನಾಡಿದ ರಾಜಮಾತೆ, ನನಗೆ ಪ್ರಶಾಂತ ಆನೆ ಬಗ್ಗೆ ಆತಂಕ ಇತ್ತು. ಅಂಬಾರಿ ಹೇಗೆ ಕಟ್ಟಿಸಿಕೊಳ್ಳುತ್ತಾನೋ, ಅಂಬಾರಿ ಹೊತ್ತು ಹೇಗೆ ಸಾಗುತ್ತಾನೋ ಎಂಬ ದಿಗಿಲಿತ್ತು,ಈ ಹಿಂದೆ ಯಾವ ಆತಂಕ ಇರಲಿಲ್ಲ. ಇದೇ ಮೊದಲ ಬಾರಿಗೆ ಈ ರೀತಿಯ ಆತಂಕ ಇತ್ತು. ಆದರೆ ಪ್ರಶಾಂತ ಆನೆ ಎಲ್ಲರ ಆತಂಕ ದೂರ ಮಾಡಿದ್ದಾನೆ. ಚಾಮುಂಡೇಶ್ವರಿ ಎಲ್ಲರಿಗೂ ಆಶೀರ್ವಾದ ಮಾಡಿದ್ದಾಳೆ ಎಂದು ಹೇಳಿದರು.
ಚಾಮುಂಡಿ ಬೆಟ್ಟದಲ್ಲಿ ರಥೋತ್ಸವದಲ್ಲಿ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಜತೆ ಮಹಾರಾಜ ಯದುವೀರ್ ಒಡೆಯರ್, ಮಹಾರಾಣಿ ತ್ರಿಷಿಕಾ ಕುಮಾರಿ ಒಡೆಯರ್ ಸೇರಿದಂತೆ ರಾಜವಂಶಸ್ಥರು ಭಾಗಿಯಾಗಿದ್ದರು.
