ಚಾಮರಾಜನಗರ: ಜಿಲ್ಲೆಯನ್ನು ಬರಪೀಡಿತವೆಂದು ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ಬೆಳೆ ಹಾಗೂ ಕೃಷಿ ಸಂಬಂಧಿತ ಸಾಲಗಳನ್ನು ಬಲವಂತವಾಗಿ ವಸೂಲಿ ಮಾಡಬಾರದು ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ರೈತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ರೈತ ಮುಖಂಡರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಕೆಲ ಸಹಕಾರ ಬ್ಯಾಂಕುಗಳಲ್ಲಿ ಸಾಲ ಪಾವತಿಸುವಂತೆ ಒತ್ತಾಯಿಸಲಾಗುತ್ತಿದೆ ಎಂದು ರೈತ ಮುಖಂಡರು ಸಭೆಯಲ್ಲಿ ಗಮನಕ್ಕೆ ತಂದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಶ್ರೀರೂಪ ಅವರು ಜಿಲ್ಲೆಯ ಎಲ್ಲಾ ತಾಲೂಕು ತೀವ್ರ ಬರಪೀಡಿತ ಎಂದು ಘೋಷಣೆಯಾಗಿದೆ. ಪ್ರಸ್ತುತ ಬರಗಾಲದ ಕಾರಣದಿಂದ ಅರ್ಹ ಬೆಳೆ ಸಾಲಗಳು ಹಾಗೂ ಕೃಷಿ ಆಧಾರಿತ ಸಾಲಗಳ ಮರುಪಾವತಿಯನ್ನು ೧೨ ತಿಂಗಳ ಕಾಲ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಹಾಗಾಗಿ ರೈತರಿಂದ ಬಲವಂತವಾಗಿ ಸಾಲ ವಸೂಲಾತಿ ಮಾಡಬಾರದು ಎಂದು ಬ್ಯಾಂಕ್ ಸಂಬಂಧಿತ ಅಧಿಕಾರಿಗಳಿಗೆ ಕಡಕ್ ಸೂಚನೆ ನೀಡಿದರು.
ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಿಗೆ ಸೂಚನೆ ನೀಡಿ ಸಾಲ ವಸೂಲಾತಿಗೆ ಒತ್ತಾಯ ಮಾಡದಂತೆ ಸಂಬಂಧಿತ ಅಧಿಕಾರಿಗಳು ನಿರ್ದೇಶನ ನೀಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಚಂಗಡಿ ಗ್ರಾಮಕ್ಕೆ ಸಂಬಂಧಿಸಿದಂತೆ ಮುಖಂಡರಾದ ಕರಿಯಪ್ಪ ಅವರು ಮಾತನಾಡಿ ಚಂಗಡಿ ಗ್ರಾಮ ಸ್ಥಳಾಂತರ ಘೋಷಣೆ ೨೦೨೦ರಲ್ಲೇ ಆಗಿದೆ. ಆದರೂ ಇನ್ನೂ ಕಾರ್ಯ ರೂಪಕ್ಕೆ ತಂದಿಲ್ಲ. ಗ್ರಾಮದಲ್ಲಿ ಮೂಲ ಸೌಕರ್ಯಗಳು ಇಲ್ಲ ಎಂದು ಹೇಳಿದರು.
ಇದಕ್ಕೆ ಜಿಲ್ಲಾಧಿಕಾರಿಯವರು ಉತ್ತರಿಸಿ ಮುಂದಿನ ವಾರವೇ ಚಂಗಡಿ ಗ್ರಾಮದ ಸಂಬಂಧ ಪ್ರತ್ಯೇಕ ಸಭೆ ಕರೆಯಲಾಗುವುದು. ಹಿರಿಯ ಅರಣ್ಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದು, ಅಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕಾಡಂಚಿನ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕಕ್ಕಾಗಿ ಕೈಗೆತ್ತಿಕೊಂಡಿರುವ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಕೆವರು ದೂರಿದರು.
ಈಗಾಗಲೇ ನಾನು ಹಲವು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಅಧಿಕಾರಿಗಳಿಗೆ ಕಾಮಗಾರಿ ತ್ವರಿತವಾಗಿ ಪೂಣಗೊಳಿಸಲು ಸೂಚಿಸಿದ್ದೇನೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು
ಹಲವು ಭಾಗಗಳಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದ ಜನರು ಕಂಗಾಲಾಗಿದ್ದಾರೆ ಕೆಲವರ ಪ್ರಸ್ತಾಪಕ್ಕೆ ಜಿಲ್ಲಾಧಿಕಾರಿಯವರು ಸ್ಥಳದಲ್ಲಿಯೇ ಇದ್ದ ಅರಣ್ಯ ಅಧಿಕಾರಿಗಳಿಗೆ ತ್ವರಿತವಾಗಿ ಕ್ರಮವಹಿಸುವಂತೆ ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಿಯದರ್ಶಿನಿ, ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್, ರೈತ ಮುಖಂಡರಾದ ಬಂದಿಗೌಡನಹಳ್ಳಿ ನಟರಾಜ್, ಚಂಗಡಿ ಕರಿಯಪ್ಪ, ಪೃಥ್ವಿ, ಮತ್ತಿತರ ಮುಖಂಡರು, ರೈತ ಸಂಘಟನೆಯ ಪ್ರತಿನಿಧಿಗಳು, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಭಾನುಪ್ರಕಾಶ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಗಿರೀಶ್, ತಹಶೀಲ್ದಾರರಾದ ತನ್ಮಯ್, ಚೈತ್ರ, ನಯನ, ಡಿವೈಎಸ್ಪಿ ಸ್ನೇಹರಾಜ್, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಾರ್ಯಪಾಲಕ ಎಂಜಿನಿಯರ್ ಪ್ರದೀಪ್, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಸುರೇಖ, ವಿವಿಧ ಇಲಾಖೆಗಳ ಅಧಿಕಾರಿಗಳು, ಮೈಕ್ರೋ ಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
