ಮೈಸೂರು: 92.7 BIG FM, ಗಂಧದಗುಡಿ ಫೌಂಡೇಶನ್ ಹಾಗೂ ಮೈಸೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಸ್ವಚ್ಛ ದಸರಾ 2026 ಕಾರ್ಯಕ್ರಮವನ್ನು ನಗರದ ಕೋಟೆ ಆಂಜನೇಯ ದೇವಸ್ಥಾನದ ಆವರಣ ಹಾಗೂ ಅರಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಯೋಜಿಸಲಾಯಿತು.
ದಸರಾ ಹಬ್ಬದ ಸಂದರ್ಭದಲ್ಲಿ ಮೈಸೂರಿನ ಸ್ವಚ್ಛತೆಯನ್ನು ಕಾಪಾಡುವುದು, ಸಾರ್ವಜನಿಕರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಸ್ವಚ್ಛತಾ ಕಾರ್ಯಗಳಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ಹೆಚ್ಚಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.
ಸ್ವಚ್ಛತೆಯ ಕುರಿತು ಜನಜಾಗೃತಿ ಮೂಡಿಸುವ ಮೂಲಕ ಮೈಸೂರನ್ನು ಭಾರತದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮತ್ತೆ ಪ್ರಥಮ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ನೇಪಥ್ಯ ರಂಗತಂಡದ ವತಿಯಿಂದ ಸ್ವಚ್ಛತೆಯ ಮಹತ್ವವನ್ನು ಸಾರುವ ಬೀದಿ ನಾಟಕವನ್ನು ಪ್ರದರ್ಶಿಸಿ ಜನರಲ್ಲಿ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ 92.7 BIG FMನ ಆರ್ಜೆ ವಿಶ್ವಾಸ್, ಆರ್ಜೆ ಪ್ರದೀಪ್ (ನೆನಪಿನ ನಾವಿಕ), ಆರ್ಜೆ ವಿಕ್ಕಿ, ಆರ್ಜೆ ದುಷ್ಯಂತ್ ಹಾಗೂ ಆರ್ಜೆ ಅಂಟೋ ಭಾಗವಹಿಸಿ ಸಾರ್ವಜನಿಕರಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಿದರು.
ಗಂಧದಗುಡಿ ಫೌಂಡೇಶನ್ ರಾಜ್ಯಾಧ್ಯಕ್ಷರಾದ ಆರ್ಯನ್ ಗಂಧದಗುಡಿ, ಯಶೋಧ ಆರ್ ಹಾಗೂ ಹರ್ಷಿತ ಮಹೇಶ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಪಾರಂಪರಿಕ ಕಟ್ಟಡಗಳ ಆಯುಕ್ತರಾದ ಶಿವರಾಜ್ ಪಿ. ಹಾಗೂ ಕನ್ನಡ ಚಿತ್ರರಂಗದ ಹೆಸರಾಂತ ನಟ ವಸಿಷ್ಠ ಸಿಂಹ ಅವರು ಭಾಗವಹಿಸಿ, ಸ್ವಚ್ಛ ದಸರಾ ಅಭಿಯಾನಕ್ಕೆ ಬೆಂಬಲ ನೀಡುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು.
ಸ್ವಚ್ಛ ಮೈಸೂರು, ಸುಂದರ ಮೈಸೂರು ಎಂಬ ಆಶಯದೊಂದಿಗೆ, ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸಿ, ಮೈಸೂರಿನ ಸೌಂದರ್ಯ ಹಾಗೂ ಪಾರಂಪರಿಕ ಪರಂಪರೆಯನ್ನು ಕಾಪಾಡುವ ನಿಟ್ಟಿನಲ್ಲಿ ಸ್ವಚ್ಛ ದಸರಾ 2026 ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಚರಿಸಲಾಯಿತು.
