ಬೆಂಗಳೂರು: ದಲಿತರನ್ನು ಕೇವಲ ಮತಬ್ಯಾಂಕ್ಗೆ ಬಳಸಿಕೊಂಡು, ಅಧಿಕಾರ ಬಂದಾಗ ಅಪಮಾನಿಸುವುದೇ ಕಾಂಗ್ರೆಸ್ ಸಂಸ್ಕೃತಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಮೈಸೂರು ದಸರಾ ಜಂಬೂಸವಾರಿ ವೇದಿಕೆಗೆ ತೆರಳುತ್ತಿದ್ದ ವೇಳೆ ದಲಿತ ಮಂತ್ರಿಗಳನ್ನು ತಡೆದು ಅಪಮಾನಿಸಿರುವುದು ಖಂಡನೀಯ ಎಂದು ಟ್ವೀಟ್ ಮಾಡಿ ಹೇಳಿದ್ದಾರೆ.
ಸಿಎಂ ಡಿ.ಕೆ.ಶಿವಕುಮಾರ್ ಅವರೇ ನಿಮ್ಮ ಜೊತೆಯಲ್ಲೇ ಬಂದ ಸಂಪುಟದ ಸಹೋದ್ಯೋಗಿಗಳನ್ನು ವೇದಿಕೆಗೆ ಕರೆದೊಯ್ಯದೆ ಹಾಗೆಯೇ ಬಿಟ್ಟು ಹೋದದ್ದು ಯಾಕೆ, ಸ್ವತಃ ಸಚಿವರಿಗೇ ಈ ದುಸ್ಥಿತಿಯಾದರೆ ಇನ್ನು ನಿಮ್ಮ ಆಡಳಿತದಲ್ಲಿ ಸಾಮಾನ್ಯರ ಗತಿಯೇನು,ಇದೇನಾ ನಿಮ್ಮ ಸಾಮಾಜಿಕ ನ್ಯಾಯ, ಇದೇನಾ ನಿಮ್ಮ ಅಂಬೇಡ್ಕರ್ ವಾದ, ಇದೇನಾ ಅವರು ಬರೆದ ಸಂವಿಧಾನದ ಮೇಲಿರುವ ನಂಬಿಕೆ
ನಾಚಿಕೆಯಾಗಬೇಕು ನಿಮಗೆ ಎಂದು ಕಿಡಿಕಾರಿದ್ದಾರೆ.
ಬಾಯಲ್ಲಿ ಜಾತ್ಯತೀತ ತತ್ವ, ಆಚರಣೆಯಲ್ಲಿ ಅಸೃಶ್ಯತೆ ಇಂಥ ದ್ವಂದ್ವದಿಂದ ಕರ್ನಾಟಕಕ್ಕೆ ಕಳಂಕ ತಂದಿದ್ದೀರಿ,ಅಂದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ನಿಂದಿಸಿ, ಅಪಮಾನಿಸಿ, ಚುನಾವಣಾ ಕಣದಲ್ಲಿ ನಾಲ್ಕು ಬಾರಿ ಸೋಲಿಸಿ, ಚುನಾವಣಾ ಕಣದಿಂದಲೇ ಹತ್ತಿಕ್ಕಿ ದಲಿತ ಜ್ಯೋತಿಯನ್ನು ನಂದಿಸಿದ ಕಾಂಗ್ರೆಸ್, ಮುಕ್ಕಾಲು ಶತಮಾನದ ನಂತರವೂ ಅದನ್ನು ನಿಷ್ಠೆಯಿಂದ ಪಾಲಿಸುತ್ತಿದೆ. ಶ್ರೀ ಚಾಮುಂಡೇಶ್ವರಿ ಅಮ್ಮನ ಮೆರವಣಿಗೆಯಲ್ಲಿ ದಲಿತ ದ್ವೇಷವನ್ನು ಆಚರಿಸಿದ್ದು ಸಾಕ್ಷಾತ್ ಆ ತಾಯಿಯೇ ನಿಮ್ಮನ್ನು ಕ್ಷಮಿಸುವುದಿಲ್ಲ. ತಪ್ಪು ಮಾಡಿದ್ದೀರಿ, ಮುಂದೆ ಅನುಭವಿಸುತ್ತೀರಿ ಎಂದು ಹೆಚ್ ಡಿ ಕೆ ಎಚ್ಚರಿಸಿದ್ದಾರೆ.
ಸಂಪುಟದಲ್ಲಿರುವ ಎಲ್ಲಾ ದಲಿತ ಸಚಿವರು ಮುಖ್ಯಮಂತ್ರಿ ಹಾಗೂ ಅವರ ಅಧಿಕಾರಿಗಳು ವರ್ತಿಸಿದ ರೀತಿಯನ್ನು ಖಂಡಿಸಬೇಕು. ಅಷ್ಟೇ ಅಲ್ಲ, ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ತಂದ ಇಂತಹ ವ್ಯಕ್ತಿ ಕೈಕೆಳಗೆ ಕೆಲಸ ಮಾಡುವುದೇ ಅಪಮಾನ. ನೀವೆಲ್ಲರೂ ರಾಜೀನಾಮೆ ಬಿಸಾಡಿ ಹೊರಬರುತ್ತೀರೋ ಅಥವಾ ನಿಮ್ಮ ಗೌರವವನ್ನು ಬದಿಗಿಟ್ಟು ಮುಂದುವರಿಯುತ್ತೀರೋ ಎಂಬುದು ನಿಮಗೆ ಬಿಟ್ಟಿದ್ದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ
ನಾಡಹಬ್ಬ ದಸರಾ ವೇಳೆ ನಿಮ್ಮ ಇಲಾಖೆಯ ಅಧಿಕಾರಿಗಳು ತೋರಿದ ಈ ದುವರ್ತನೆ ಬಗ್ಗೆ ಬಾಯಿಬಿಡಿ ಎಂದು ಆಗ್ರಹಿಸಿದ್ದಾರೆ.
