ಮೈಸೂರು: ಹಾಲು ಕರೆಯುವ ಸ್ಪರ್ಧೆಯಲ್ಲಿ ಬೆಂಗಳೂರು ಗ್ರಾಮಾಂತರದ ಅಶ್ವಿನಿ ಅಂಬರೀಶ್ ಬಿಡದಿ ಅವರು ಮೊದಲ ಸ್ಥಾನದ ಜೊತೆಗೆ 1 ಲಕ್ಷ ಬಹುಮಾನ ಪಡೆದುಕೊಂಡಿದ್ದಾರೆ.
ನಗರದ ಜೆ. ಕೆ ಮೈದಾನದಲ್ಲಿ ರೈತ ದಸರಾ 2026 ಕರ್ನಾಟಕ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಬೆಂಗಳೂರು ಗ್ರಾಮಾಂತರದ ಅಶ್ವಿನಿ ಅಂಬರೀಶ್ ಬಿಡದಿ ಅವರು ತಮ್ಮ H.F ಕಪ್ಪು ಬಿಳಿ ಹಸುವಿನಿಂದ ಬೆಳಿಗ್ಗೆ 23.300 ಲೀಟರ್ ಮತ್ತು ಸಂಜೆ 20.900 ಲೀಟರ್ ಸೇರಿ ಒಟ್ಟು 44.200 ಲೀಟರ್ ಹಾಲು ಕರೆಯುವ ಮೂಲಕ ಮೊದಲ ಸ್ಥಾನ ಪಡೆದುಕೊಂಡರು.
ಸಾಲಿಗ್ರಾಮದ ಶ್ರೀ ಗುರುರಾಘವೇಂದ್ರ ಡೈರಿ ಫಾರಂ ಒಟ್ಟು 42.400 ಲೀಟರ್ ಹಾಲು ಕರೆಯುವುದರ ಮೂಲಕ ಎರಡನೇ ಸ್ಥಾನ
ಪಡೆದಿದೆ.
ಬೆಂಗಳೂರಿನ ರವಿ.ಎಸ್ ಬಿನ್ ಸಂಜೀವರಾಜುಅವರು ಒಟ್ಟು 41.750 ಲೀಟರ್ ಹಾಲನ್ನು ಪಡೆದು ಮೂರನೇ ಸ್ಥಾನ ಗಳಿಸಿದ್ದಾರೆ.
ನಾಲ್ಕನೇ ಸ್ಥಾನವನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಕಿರಣ್ ಗೌಡ ಅವರು ಒಟ್ಟು 40.550 ಲೀಟರ್ ಹಾಲು ಕರೆಯುವ ಮೂಲಕ ಪಡೆದುಕೊಂಡರು.
ಈ ವೇಳೆ ಮುಖ್ಯ ಪಶು ವೈದ್ಯಾಧಿಕಾರಿ ಡಾ. ನಂಜೇಶ್ ಬಿ. ಎಸ್. ಅವರು ಮಾತನಾಡಿ,
ಈ ಸ್ಪರ್ಧೆಯನ್ನು ಯಶಸ್ವಿಗೊಳಿಸಲು ಮೈಸೂರು ಜಿಲ್ಲಾ ಗೋಪಾಲಕರ ಸಂಘದ ಅಧ್ಯಕ್ಷರಾದ ನಾಗಭೂಷಣ್ ಹಾಗೂ ಅವರ ಸಮಿತಿಯ ಸದಸ್ಯರು ಬಹಳ ಶ್ರಮಿಸಿದ್ದು, ಹೈನುಗಾರರಿಗೆ ತಕ್ಕ ಸಹಕಾರವನ್ನು ನೀಡಿದ್ದಾರೆ ಎಂದು ಹೇಳಿದರು.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 1 ಲಕ್ಷ ರೂಪಾಯಿ, ದ್ವಿತೀಯ ಬಹುಮಾನ 80,000 ರೂಪಾಯಿ, ತೃತೀಯ ಬಹುಮಾನ 60,000 ರೂಪಾಯಿ ಹಾಗೂ ನಾಲ್ಕನೇ ಬಹುಮಾನ 40,000 ರೂಪಾಯಿಗಳನ್ನು ನಿಗದಿಪಡಿಸಲಾಗಿತ್ತು. ಇದರೊಂದಿಗೆ, ದಿನಕ್ಕೆ 25 ಕೆ.ಜಿ ಗಿಂತ ಹೆಚ್ಚು ಹಾಲು ಕರೆಯುವ ಎಲ್ಲಾ ಹಸುಗಳಿಗೂ ತಲಾ 10,000 ರೂಪಾಯಿಗಳ ಪ್ರೋತ್ಸಾಹ ಧನವನ್ನು ಸಹ ನೀಡಲಾಯಿತು.
ಇದೇ ಮೊದಲ ಬಾರಿಗೆ ಸ್ಪರ್ಧೆಯಲ್ಲಿ ಮಿಲ್ಕಿಂಗ್ ಮೆಷಿನ್ ಬಳಸಿ ಹಾಲು ಕರೆಯಲು ಅವಕಾಶ ಕಲ್ಪಿಸಲಾಗಿತ್ತು. ಈ ಬಾರಿ ಅತಿ ಹೆಚ್ಚು ಜಾನುವಾರುಗಳು ನೋಂದಾಯಿಸಿಕೊಂಡಿದ್ದು, ಅಂತಿಮವಾಗಿ 18 ಜಾನುವಾರುಗಳು ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದವು. ರೈತರನ್ನು ಉತ್ತೇಜಿಸುವ ಇಂತಹ ಕಾರ್ಯಕ್ರಮಗಳು ಗ್ರಾಮೀಣಾಭಿವೃದ್ಧಿಗೆ ಮತ್ತು ಹೈನುಗಾರಿಕೆಯ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡುತ್ತವೆ ಎಂದು ತಿಳಿಸಿದರು.
ರೈತ ದಸರಾ ಉಪಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಟಿ.ಎಂ., ಇಲಾಖೆಯ ಉಪನಿರ್ದೇಶಕರಾದ ಡಾ. ಸಿದ್ಧರಾಮು, ರೈತ ದಸರಾ ಉಪಸಮಿತಿಯ ಕಾರ್ಯದರ್ಶಿ ಹಾಗೂ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಜಿ.ಎಚ್. ಮಂಜುನಾಥ್, ಮೈಸೂರು ವಿಭಾಗದ ಜಂಟಿ ನಿರ್ದೇಶಕರು (ಪಶುಪಾಲನಾ ಇಲಾಖೆ) ಡಾ. ಶ್ರೀಧರ್ ಮೂರ್ತಿ. ಬೆಂಗಳೂರು ವಿಭಾಗದ ಜಂಟಿ ನಿರ್ದೇಶಕರಾದ ಡಾ. ರಮೇಶ್, ಮೈಸೂರು ನಗರ ಗೋಪಾಲಕರ ಸಂಘದ ಅಧ್ಯಕ್ಷರಾದ ನಾಗಭೂಷಣ್, ಗೋಪಾಲಕರ ಸಂಘದ ಉಪಾಧ್ಯಕ್ಷರು ಹಾಗೂ ಮಾಜಿ ಸದಸ್ಯರಾದ ಗೋಪಿ ಹಾಗೂ ಎಲ್ಲಾ ಪದಾಧಿಕಾರಿಗಳು, ಗೋಪಾಲಕರು, ರೈತರು ಮತ್ತಿತರರು ಉಪಸ್ಥಿತರಿದ್ದರು.
