ಮೈಸೂರು: ಹಾಲಿ,ಮಾಜಿ ಮುಖ್ಯ ಮಂತ್ರಿಗಳು ಭೇಟಿಯಾಗಿ ಗಹನವಾದ ಮಾತುಕತೆ ನಡೆಸಿದ ವಿಷಯ ಈಗ ರಾಜ್ಯದಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ.
ಕೆಆರ್ಎಸ್ ನಲ್ಲಿ ಕಾವೇರಿ ಆರತಿ ಕಾರ್ಯಕ್ರಮದ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೇರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿದುದು ವಿಶೇಷ.
ಮೈಸೂರಿನ ಕುವೆಂಪುನಗರದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೊಸ ಮನೆಗೆ ಡಿಕೆಶಿ ಭೇಟಿ ನೀಡಿದ್ದು,ರಾಜಕೀಯ ತಿರುವು ಪಡೆದುಕೊಂಡಿದೆ.
ಇಬ್ಬರು ನಾಯಕರು ಸುಮಾರು ಅರ್ಧ ಗಂಟೆ ಕಾಲ ಗುಪ್ತ ಮಾತುಕತೆ ನಡೆಸಿದ್ದಾರೆ.
ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ವಿಚಾರಕ್ಕೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಅವರಿಗೆ ನೈತಿಕ ಬೆಂಬಲ ನೀಡಿದ್ದಾರೆ. ಚಿಂತೆ ಮಾಡಬೇಡಿ, ನಾವೆಲ್ಲರೂ ನಿಮ್ಮ ಜೊತೆ ಇದ್ದೇವೆ ಎಂದು ಧೈರ್ಯ ತುಂಬಿದ್ದಾರೆ ಎಂದು ತಿಳಿದುಬಂದಿದೆ.
ಕೆಆರ್ಎಸ್ ಕಾರ್ಯಕ್ರಮ ಮುಗಿದ ತಕ್ಷಣ ನೇರವಾಗಿ ಮಾಜಿ ಸಿಎಂ ನಿವಾಸಕ್ಕೆ ಹಾಲಿ ಸಿಎಂ ಭೇಟಿ ನೀಡಿರುವುದು ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿರುವುದಂತೂ ಸತ್ಯ.
ಸದ್ಯ ಸ್ಟಿಂಗ್ ವಿಡಿಯೋ ವಿಚಾರದಲ್ಲಿ ರಾಜ್ಯ ರಾಜಕಾರಣ ಬಿಸಿಯಾಗಿರುವ ಹೊತ್ತಿನಲ್ಲೇ ಈ ಇಬ್ಬರು ನಾಯಕರ ದಿಢೀರ್ ಭೇಟಿಯು ಕರ್ನಾಟಕ ರಾಜಕೀಯದಲ್ಲಿ ಮತ್ತೊಂದು ಸಂಚಲನಕ್ಕೆ ಕಾರಣವಾಗಿದೆ.
