ಮೈಸೂರು: ಎಷ್ಟೇ ಮುಂದುವರಿದ ದೇಶವಾದರೂ ಕೃಷಿ ನಿರ್ಲಕ್ಷಿಸಿದರೆ ಆ ದೇಶ ಅಭಿವೃದ್ಧಿ ಹೊಂದುವುದಿಲ್ಲ ಏಕೆಂದರೆ ಮಾನವ ಸಂಕುಲ ಬದುಕಬೇಕೆಂದರೆ ಆಹಾರ ಬೇಕು ಹಾಗಾಗಿ ರೈತನೇ ನಾಡಿನ ಜೀವಾಳ ಎಂದು ಸಚಿವ ಡಾ.ಯತೀಂದ್ರ ಹೇಳಿದರು.
ಮೈಸೂರು ದಸರಾ ಮಹೋತ್ಸವ ಪ್ರಯುಕ್ತ ನಗರದ ಜೆ.ಕೆ ಗ್ರೌಂಡ್ ಆವರಣದಲ್ಲಿ ಆಯೋಜಿಸಲಾಗಿದ್ದ ರೈತ ದಸರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಶೇ.46% ರಷ್ಟು ಉದ್ಯೋಗ ಸೃಷ್ಟಿಯಾಗುವುದೇ ಕೃಷಿ ವಲಯದಲ್ಲಿ. ಭಾರತದಲ್ಲಿ ಈಗಲೂ ಹಳ್ಳಿಗಳೇ ಹೆಚ್ಚಾಗಿವೆ ಇದರಿಂದಲೇ ಕೃಷಿ ವಲಯ ಇನ್ನೂ ಗಟ್ಟಿಯಾಗಿದೆ ಎಂದು ಹೇಳಿದರು.
ಬರದ ಪರಿಸ್ಥಿತಿಯಲ್ಲೂ ರೈತರಿಗೆ ನಮ್ಮ ಸರಕಾರ ನೆರವಾಗಿದೆ ಈಗಾಗಲೇ 1250 ಕೋಟಿ ರೂ. ಪರಿಹಾರ ಘೋಷಣೆ ಮಾಡಲಾಗಿದೆ, ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರ ಸಹಕಾರ ನೀಡಿದರೆ ಕೃಷಿ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ ಹಾಗಾಗಿ ರೈತರು ಭಯ ಪಡುವ ಅಗತ್ಯವಿಲ್ಲ ನೀವು ನಿಜವಾದ ಕಾಯಕ ಯೋಗಿ ಎಲ್ಲರೂ ದಸರಾದಲ್ಲಿ ಭಾಗವಹಿಸಿ ಸಂಭ್ರಮಿಸಿ ಎಂದು ಯತೀಂದ್ರ ಕರೆ ನೀಡಿದರು.
ಕೃಷಿ ಸಚಿವ ಎಂ.ಪಿ ನರೇಂದ್ರಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಭೀಕರ ಬರಗಾಲದ ಮಧ್ಯೆಯೂ ರೈತ ದಸರಾವನ್ನು ವಿಜೃಂಭಣೆಯಿಂದ ಮಾಡುತ್ತಿದ್ದೇವೆ ಏಕೆಂದರೆ ಇದು ರೈತರ ಬೆವರಿನ ಪ್ರತಿಫಲದ ಸಂಭ್ರಮ ಹಾಗಾಗಿ ಬರವಿದೆ ಎಂದು ಭಯಪಡಬೇಡಿ ನಮ್ಮ ಸರಕಾರ ನಿಮ್ಮ ಜೊತೆ ಇರಲಿದೆ ಈಗಾಗಲೇ ಮೊದಲ ಹಂತದ ಬರ ಪರಿಹಾರ ನೀಡಿದ್ದೇವೆ ಮುಂದಿನ ದಿನಗಳಲ್ಲಿ ಹೆಚ್ಚಿನ ಪರಿಹಾರ ನೀಡಲಿದ್ದೇವೆ ಎಂದು ಭರವಸೆ ನೀಡಿದರು.
ಬರದ ಸಂಕಷ್ಟದಲ್ಲಿರುವ ರೈತರಿಗಾಗಿ ಈಗಾಗಲೇ ನೇಗಿಲಯೋಗಿ ಯೋಜನೆಯನ್ನು ಪ್ರಾಯೋಗಿಕವಾಗಿ ಜಿಲ್ಲೆಗೆ 2 ತಾಲ್ಲೂಕುಗಳಲ್ಲಿ ಜಾರಿಗೆ ತರಲಾಗಿದ್ದು ಮುಂದಿನ ವರ್ಷ ಎಲ್ಲಾ ತಾಲ್ಲೂಕುಗಳಲ್ಲೂ ಜಾರಿಯಾಗಲಿದೆ ಈ ಯೋಜನೆಯಿಂದ 3 ಎಕರೆ ಒಳಗಡೆ ಕೃಷಿ ಭೂಮಿ ಹೊಂದಿರುವ ರೈತರಿಗೆ ನೆರವಾಗಲಿದೆ ಹಾಗೂ ಬರದಲ್ಲಿ ಅಲ್ಪಾವಧಿ ಬೆಳೆಗಳ ಬೀಜೋತ್ಪಾದನೆ ಸಂಶೋಧನೆಗಾಗಿ ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆ ಮಾಡಿಸಲಾಗುತ್ತಿದೆ, ಆಧುನಿಕ ಕೃಷಿ ಪದ್ದತಿಯಿಂದ ಬದಲಾವಣೆ ತರುವುದು ನನ್ನ ಉದ್ದೇಶ ಎಂದು ಹೇಳಿದರು.
ಈ ವೇಳೆ ಹೊನ್ನಾರು ಸ್ಮರಣೆ ಸಂಚಿಕೆ ಬಿಡುಗಡೆಗೊಳಿಸಲಾಯಿತು ಮತ್ತು ಜಿಲ್ಲೆಯಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ ರೈತರಿಗೆ ಶ್ರೇಷ್ಠ ಕೃಷಿಕ ರೈತ ಪ್ರಶಸ್ತಿಯನ್ನು ನೀಡಲಾಯಿತು ಹಾಗೂ ಪ್ರಗತಿಪರ ರೈತ ಮಹಿಳೆಯರಿಗೆ ಸೇರಿ ಒಟ್ಟು 10 ರೈತರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ರೈತ ದಸರಾ ಮೆರವಣಿಗೆಗೆ ಕೃಷಿ ಸಚಿವರಾದ ಪಿ.ಎಂ ನರೇಂದ್ರ ಸ್ವಾಮಿ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮೆರವಣಿಗೆಯಲ್ಲಿ ವಿವಿಧ ತಳಿಯ ರಾಸುಗಳು, ಬಂಡೂರು ಕುರಿ, ಪೂಜಾ ಕುಣಿತ, ಡೊಳ್ಳು ಕುಣಿತ, ಕೊಡವ ರೈತರ ನೃತ್ಯ, ಎತ್ತಿನ ಗಾಡಿಗಳು, ಕೃಷಿ ಯಂತ್ರಗಳು ಸೇರಿದಂತೆ ಹಲವಾರು ರೈತರು ಉಡುಗೆ ತೊಡುಗೆ ತೊಟ್ಟು ಮೆರವಣಿಗೆಯಲ್ಲಿ ಸಾಗಿದರು. ಮೆರವಣಿಗೆಯು ಕೋಟೆ ಆಂಜನೇಯಸ್ವಾಮಿ ದೇವಸ್ಥಾದಿಂದ ಜೆ.ಕೆ.ಗ್ರೌಂಡ್ ಆವರಣದವರೆಗೂ ಸಾಗಿತು.
ರೇಷ್ಮೆ ಹಾಗೂ ಪಶುಸಂಗೋಪನಾ ಸಚಿವರಾದ ಪುಟ್ಟರಂಗಶೆಟ್ಟಿ, ಮುಜರಾಯಿ ಇಲಾಖೆ ಹಾಗೂ ಮೀನುಗಾರಿಕೆ ಸಚಿವರಾದ ಬಸವಂತಪ್ಪ, ಅಬಕಾರಿ ಸಚಿವರಾದ ಕೆ.ಎಂ ಶಿವಲಿಂಗೇಗೌಡ, ಪರಿಷತ್ ಸದಸ್ಯರಾದ ಡಾ.ತಿಮ್ಮಯ್ಯ, ಶಿವಕುಮಾರ್, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಕೃಷಿ ಇಲಾಖೆ ಆಯುಕ್ತರಾದ ಸತೀಶ್, ರೈತ ದಸರಾ ಉಪಸಮಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು, ಸದಸ್ಯರು ಹಾಜರಿದ್ದರು.
