ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಅರಮನೆ ವೇದಿಕೆಯಲ್ಲಿ ಸಂಜೆ ಖ್ಯಾತ ಗಾಯಕ ಮತ್ತು ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರ ಸಂಗೀತ ಕಾರ್ಯಕ್ರಮ ಜನರಿಗೆ ಮುದ ನೀಡಿತು
ದೀಪಾಲಂಕಾರಗೊಂಡ ಅರಮನೆಯ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಘು ದೀಕ್ಷಿತ್ ಅವರು ಜನಪ್ರಿಯ ಹಾಡುಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
ಇದೇ ವೇಳೆ ಮಾತನಾಡಿದ ಅವರು, ಮೈಸೂರಿಗೆ ಬಂದಿದ್ದೀನಿ,ನನ್ನ ತವರೂರಿನಲ್ಲಿ ಕಾರ್ಯಕ್ರಮ ನೀಡುತ್ತಿರುವುದು ತುಂಬಾ ಸಂತೋಷವಾಗಿದೆ. ಅರಮನೆ ಮುಂದೆ ಇಷ್ಟು ಜನ ಸೇರಿರುವುದನ್ನು ನೋಡಲು ಎರಡು ಕಣ್ಣು ಸಾಲದು ಎಂದು ಹೇಳಿದರು.
ಈ ಹಿಂದೆ ಮೈಸೂರು ಮಹಾರಾಜರು ಅವಕಾಶ ನೀಡಿದಾಗ ಇದೇ ಅರಮನೆಯಲ್ಲಿ ಕಾರ್ಯಕ್ರಮ ನೀಡಿದ್ದೆ ಎಂದು ಸ್ಮರಿಸಿದರು.
ನಂತರ ತಮ್ಮ ತಂಡದ ಸದಸ್ಯರಾದ ವಯೋಲಿನ್- ಅಕ್ಷಯ್ ಗಣೇಶ್, ಡ್ರಮ್ಸ್- ಜಾರ್ಜ್ ಜೇಕಬ್, ಕೊಳಲು- ಗೌತಮ್ ಹೆಗ್ಡೆ, ಗಿಟಾರ್- ಸಂಜಯ್ ಕುಮಾರ್ ಅವರನ್ನು ಪರಿಚಯಿಸಿದರು.
ನಿನ್ನಾ ಪೂಜೆಗೆ ಬಂದೆ ಮಹದೇಶ್ವರ, ಹೇ ಭಗವಾನ್, ಮುಂಜಾನೆ ಮಂಜಲ್ಲಿ, ಕೋಡಗನ ಕೋಳಿ ನುಂಗಿತ್ತಾ ಸೇರಿದಂತೆ ತಮ್ಮ ಸೂಪರ್ ಹಿಟ್ ಹಾಡುಗಳನ್ನು ರಘು ದೀಕ್ಷಿತ್ ಪ್ರಸ್ತುತಪಡಿಸಿದರು. ಅವರ ಜಾನಪದ ಮತ್ತು ರಾಕ್ ಫ್ಯೂಷನ್ ಶೈಲಿಯ ಹಾಡುಗಳಿಗೆ ಯುವಜನತೆ ಕುಣಿದು ಕುಪ್ಪಳಿಸಿತು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಆಯುಕ್ತ ನಿತೇಶ್ ಕುಮಾರ್ ಪಾಟೀಲ್, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಜಿ, ಜಿಲ್ಲಾ ಪಂಚಾಯತ್ ಸಿಇಒ ಎಸ್. ಯುಕೇಶ್ ಕುಮಾರ್, ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯ, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಮಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಎಂ.ಡಿ. ಸುದರ್ಶನ್ ಮತ್ತಿತರರು ಪಾಲ್ಗೊಂಡಿದ್ದರು.
