ಮೈಸೂರು: ಮಲೇಷ್ಯಾದ ಪೆನಾಂಗ್ನಲ್ಲಿ ನಡೆದ ಏಷ್ಯಾ-ಪೆಸಿಫಿಕ್ ಡೆಫ್ ಮಲ್ಟಿ ಸ್ಪೋರ್ಟ್ಸ್ ಚಾಂಪಿಯನ್ಶಿಪ್-2026ರಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ಗೆದ್ದ ಕರ್ನಾಟಕದ ಮೂವರು ಶ್ರವಣದೋಷ ಕ್ರೀಡಾಪಟುಗಳನ್ನು ವಿವಿಧ ಸಂಘಟನೆಗಳ ವತಿಯಿಂದ ಅಭಿನಂದಿಸಲಾಯಿತು.
ಮೈಸೂರಿನ ರಿಷಿತಾ ಅವರು 4×100 ಮೀಟರ್ ರಿಲೇ ಓಟದಲ್ಲಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ಹಾಸನದ ಶ್ರೇಯಾ ಅವರು ಚೆಸ್ ಬ್ಲಿಟ್ಜ್ ಚಾಂಪಿಯನ್ಶಿಪ್ ಹಾಗೂ ಮಿಕ್ಸ್ಡ್ ರಾಪಿಡ್ ವಿಭಾಗದಲ್ಲಿ ತಲಾ ಒಂದು ಚಿನ್ನದ ಪದಕ ಗೆದ್ದಿದ್ದಾರೆ.
ಧಾರವಾಡದ ಅಂಬಿಕಾ ನಾಗಪ್ಪ ಮಸಗಿ ಅವರು ಚೆಸ್ ಬ್ಲಿಟ್ಜ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ, ಮಿಕ್ಸ್ಡ್ ರ್ಯಾಪಿಡ್ನಲ್ಲಿ ಚಿನ್ನದ ಪದಕ ಹಾಗೂ ಮಹಿಳೆಯರ ಕ್ಲಾಸಿಕಲ್ ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ.
ಈ ಸಾಧಕ ಕ್ರೀಡಾಪಟುಗಳನ್ನು ಅಂತರರಾಷ್ಟ್ರೀಯ ವಿಶೇಷ ಚೇತನ ಕ್ರೀಡಾಪಟು ಅಲೋಕ್ ಜೈನ್ ಅವರು ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿರುವ ಖಾಸಗಿ ಹೋಟೆಲ್ನಲ್ಲಿ ಗೌರವಿಸಿ, ಸನ್ಮಾನಿಸಿ ಮುಂದಿನ ಕ್ರೀಡಾ ಸಾಧನೆಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮೈಸೂರು ಡೆಫ್ ಅಸೋಸಿಯೇಷನ್ ಅಧ್ಯಕ್ಷ ಮೂರ್ತಿ, ಉಪಾಧ್ಯಕ್ಷ ಮಹೇಶ್ ವರ್ಮ, ನಗರಪಾಲಿಕೆ ಮಾಜಿ ಸದಸ್ಯ ಎಂ.ಡಿ. ಪಾರ್ಥಸಾರಥಿ, ಸಮಾಜ ಸೇವಕರಾದ ಗಗನ್ ಗೌಡ, ಅಮಿತ್, ಅರ್ಜುನ್, ತರಬೇತುದಾರ ರಾಘವೇಂದ್ರ, ಲಯನ್ ಸುಬ್ರಹ್ಮಣ್ಯ ಸೇರಿದಂತೆ ಕ್ರೀಡಾಪಟುಗಳ ಕುಟುಂಬದ ಸದಸ್ಯರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.
