ಬೆಂಗಳೂರು: ಜಾನಪದ ನಮ್ಮ ನಾಡಿನ ಅಸ್ಮಿತೆ, ಸಂಸ್ಕೃತಿ ಮತ್ತು ಬದುಕಿನ ಅವಿಭಾಜ್ಯ ಅಂಗವಾಗಿದೆ ಎಂದು ವಿಧಾನ ಪರಿಷತ್ ಉಪಸಭಾಪತಿ ಉಮಾಶ್ರೀ ಬಣ್ಣಿಸಿದರು.
ಜಾನಪದವನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಹುಟ್ಟಿನಿಂದ ಸಾವಿನವರೆಗೂ ಜಾನಪದ ನಮ್ಮೊಂದಿಗೆ ಇರುತ್ತದೆ. ಜಾನಪದ ಕಲೆ ಮತ್ತು ಕಲಾವಿದರ ಬದುಕನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕನ್ನಡ ಜಾನಪದ ಪರಿಷತ್ ಘಟಕದ ವತಿಯಿಂದ ಬೆಂಗಳೂರಿನ ಜ್ಞಾನಸೌಧ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಥಮ ಮಹಿಳಾ ಜಾನಪದ ಸಮ್ಮೇಳನವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಾನಪದ ಕಲಾವಿದರು ತಮ್ಮ ಇಡೀ ಜೀವನವನ್ನು ಕಲೆ, ಸಂಸ್ಕೃತಿ ಮತ್ತು ಪರಂಪರೆಯ ಉಳಿವಿಗಾಗಿ ಮುಡಿಪಾಗಿಟ್ಟಿದ್ದಾರೆ. ಆದರೆ ಅನೇಕ ಕಲಾವಿದರು ವಯೋವೃದ್ಧರಾದ ನಂತರವೂ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಅವರಿಗೆ ಸರ್ಕಾರದಿಂದ ನೀಡಲಾಗುತ್ತಿರುವ ಮಾಶಾಸನ ಅವರ ಜೀವನಕ್ಕೆ ನೆರವಾಗುತ್ತಿದೆ. ಈ ಮಾಶಾಸನವನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯವಿದ್ದು, ಮಾಶಾಸನ ಪಡೆಯಲು ಇರುವ ವಯೋಮಿತಿಯನ್ನು ಕಡಿಮೆ ಮಾಡುವ ಬಗ್ಗೆಯೂ ಚಿಂತನೆ ನಡೆಸಬೇಕಾಗಿದೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲು ಪ್ರಯತ್ನಿಸುವುದಾಗಿ ಉಮಾಶ್ರೀ ಭರವಸೆ ನೀಡಿದರು.
ಜಾನಪದ ಕಲೆ ಕೇವಲ ಮನರಂಜನೆಯ ಸಾಧನವಲ್ಲ. ಅದು ನಮ್ಮ ಪೂರ್ವಿಕರ ಬದುಕು, ಅನುಭವ, ಜ್ಞಾನ, ಆಚರಣೆ, ನಂಬಿಕೆ ಮತ್ತು ಜೀವನ ಪದ್ಧತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಅಮೂಲ್ಯ ಪರಂಪರೆಯಾಗಿದೆ. ಜಾನಪದ ಕಲಾವಿದರನ್ನು ಗುರುತಿಸಿ ಗೌರವಿಸುವುದರ ಜೊತೆಗೆ ಅವರ ಬದುಕಿಗೆ ಭದ್ರತೆ ಕಲ್ಪಿಸುವ ಕಾರ್ಯವೂ ನಡೆಯಬೇಕು ಎಂದು ಅವರು ಹೇಳಿದರು.
ಮಹಿಳೆಯರು ಜಾನಪದ ಪರಂಪರೆಯ ಸಂರಕ್ಷಣೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ತಲೆತಲಾಂತರಗಳಿಂದ ಬಂದಿರುವ ಅನೇಕ ಜಾನಪದ ಕಲೆಗಳು ಮಹಿಳೆಯರ ಮೂಲಕವೇ ಉಳಿದುಕೊಂಡಿವೆ. ಇಂತಹ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಇನ್ನಷ್ಟು ವ್ಯಾಪಕವಾಗಿ ನಡೆಯಬೇಕು ಎಂದು ಉಮಾಶ್ರೀ ಸಲಹೆ ನೀಡಿದರು.
ಸಮ್ಮೇಳನದ ಸರ್ವಾಧ್ಯಕ್ಷೆ ಡಾ. ಪದ್ಮಾ ನಾಗರಾಜ್ ಮಾತನಾಡಿ, ಜಾನಪದದ ಎಲ್ಲ ಆಯಾಮಗಳನ್ನು ಸಮಗ್ರವಾಗಿ ಗುರುತಿಸುವ ಮತ್ತು ದಾಖಲಿಸುವ ಅಗತ್ಯವಿದೆ. ಜಾನಪದ ಕೇವಲ ಒಂದು ಕಲೆ ಅಥವಾ ಮನರಂಜನೆಯ ಕ್ಷೇತ್ರವಲ್ಲ; ಅದು ನಮ್ಮ ಸಾಮಾಜಿಕ, ಸಾಂಸ್ಕೃತಿಕ ಮತ್ತು ಜೀವನ ಪರಂಪರೆಯ ಪ್ರತಿಬಿಂಬವಾಗಿದೆ ಎಂದು ಹೇಳಿದರು.
ಜಾನಪದದ ವಿವಿಧ ಪ್ರಕಾರಗಳಾದ ಹಾಡು, ಕಥೆ, ಗಾದೆ, ಒಗಟು, ಆಚರಣೆ, ಸಂಪ್ರದಾಯ, ನೃತ್ಯ, ವಾದ್ಯ, ಕರಕುಶಲ, ಗ್ರಾಮೀಣ ಜ್ಞಾನ ಮತ್ತು ಜನಪದ ನಂಬಿಕೆಗಳನ್ನು ದಾಖಲಿಸಿ ಸಂರಕ್ಷಿಸುವ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಹಿರಿಯ ಕಲಾವಿದರಲ್ಲಿರುವ ಜ್ಞಾನವನ್ನು ದಾಖಲಿಸದಿದ್ದರೆ ಮುಂದಿನ ದಿನಗಳಲ್ಲಿ ಅನೇಕ ಅಮೂಲ್ಯ ಜಾನಪದ ಸಂಪತ್ತು ಕಣ್ಮರೆಯಾಗುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಹಿರಿಯರು ತಮ್ಮ ಅನುಭವ ಮತ್ತು ಜ್ಞಾನವನ್ನು ಯುವಜನತೆಗೆ ಹಂಚಬೇಕು. ಯುವಜನತೆ ಜಾನಪದವನ್ನು ಕೇವಲ ಹಳೆಯ ಪರಂಪರೆ ಎಂದು ನೋಡುವ ಬದಲು ಅದನ್ನು ತಮ್ಮ ಬದುಕಿನ ಭಾಗವನ್ನಾಗಿ ಮಾಡಿಕೊಂಡು ಮುಂದುವರಿಸಬೇಕು ಎಂದು ಡಾ. ಪದ್ಮಾ ನಾಗರಾಜ್ ಕರೆ ನೀಡಿದರು.
ಜಾನಪದವನ್ನು ಉಳಿಸುವ ಕಾರ್ಯ ಕೇವಲ ಸರ್ಕಾರ ಅಥವಾ ಒಂದು ಸಂಸ್ಥೆಯ ಜವಾಬ್ದಾರಿಯಲ್ಲ. ಸಮಾಜ, ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸಂಘ-ಸಂಸ್ಥೆಗಳು ಹಾಗೂ ಯುವಜನತೆ ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಜಾನಪದ ಪರಂಪರೆಯನ್ನು ಬಲವಾಗಿ ಮುಂದುವರಿಸಲು ಸಾಧ್ಯ ಎಂದು ಅವರು ಹೇಳಿದರು.
ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ್ ಅವರು ಮಾತನಾಡಿ, ಕನ್ನಡ ಜಾನಪದ ಪರಿಷತ್ ರಾಜ್ಯದಾದ್ಯಂತ ಜಾನಪದ ಕಲೆ, ಕಲಾವಿದರು ಹಾಗೂ ಜಾನಪದ ಸಂಸ್ಕೃತಿಯ ಸಂರಕ್ಷಣೆಗೆ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಡಾ. ಜಾನಪದ ಎಸ್. ಬಾಲಾಜಿ ಅವರು ಜಾನಪದ ಕಲೆ ಮತ್ತು ಕಲಾವಿದರ ಸಂರಕ್ಷಣೆ, ಜಾನಪದ ದಾಖಲಾತಿ ಹಾಗೂ ಯುವಜನತೆಯಲ್ಲಿ ಜಾನಪದದ ಬಗ್ಗೆ ಅರಿವು ಮೂಡಿಸುವ ಅಗತ್ಯದ ಕುರಿತು ಮಾತನಾಡಿದರು.
ಡಾ. ಸಮತಾ ದೇಶಮಾನೆ ಅವರು ಸಮ್ಮೇಳನದ ಸರ್ವಾಧ್ಯಕ್ಷೆ ಡಾ. ಪದ್ಮಾ ನಾಗರಾಜ್ ಅವರ ಪರಿಚಯ ಮಾಡಿಕೊಟ್ಟರು. ಗೋವಿಂದರಾಜನಗರ ಘಟಕದ ಅಧ್ಯಕ್ಷ ರ. ನರಸಿಂಹಮೂರ್ತಿ ಸ್ವಾಗತಿಸಿದರು. ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ಕುಮಾರ್ ವಂದಿಸಿದರು.
ಕಾರ್ಯಕ್ರಮದಲ್ಲಿ ವಿಜಯನಗರ ಕ್ಷೇತ್ರದ ಯುವನಾಯಕರಾದ ಪ್ರದೀಪ್ ಕೃಷ್ಣಪ್ಪ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮ್ಮೇಳನಾಧ್ಯಕ್ಷರ ನುಡಿ ಯನ್ನು ಬಿಡುಗಡೆಗೊಳಿಸಿ, ನಂತರ ಮಹಿಳಾ ಸಾಧಕಿಯರನ್ನು ಸನ್ಮಾನಿಸಿ ಗೌರವಿಸಿದರು.
ಜಾನಪದ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸುಮಾರು 41 ಮಂದಿ ಸಾಧಕರಿಗೆ ವಿವಿಧ ಪ್ರಶಸ್ತಿ, ಗೌರವ ಹಾಗೂ ಬಿರುದುಗಳೊಂದಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
