ಚಾಮರಾಜನಗರ: ಬರ ಅಧ್ಯಯನಕ್ಕಾಗಿ ಆಗಮಿಸಿದ್ದ ಕೇಂದ್ರ ಅಧಿಕಾರಿಗಳ ತಂಡ ಮಂಗಳವಾರ ಸಹ ಹನೂರು ಹಾಗೂ ಗುಂಡ್ಲುಪೇಟೆ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬರದ ತೀವ್ರತೆಯನ್ನು ಪರಿಶೀಲಿಸಿತು.
ಕೇಂದ್ರ ಸರ್ಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಉಪ ಆಯುಕ್ತರಾದ ಡಾ. ಸುಧಾಮ್ ಬೇಗ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪ ಸಲಹೆಗಾರರಾದ ಆಶೀಶ್ ಪಾಂಡೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್, ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಮಹಾಲನೋಬಿಸ್ ರಾಷ್ಟ್ರೀಯ ಬೆಳೆ ಮುನ್ಸೂಚನೆ ಕೇಂದ್ರ (ಎಂಎನ್ಸಿಎಫ್ಸಿ)ದ ಉಪನಿರ್ದೇಶಕರಾದ ಕರಣ್ ಚೌಧರಿ ಅವರನ್ನೊಳಗೊಂಡ ಅಧಿಕಾರಿಗಳ ತಂಡ ಹಲವು ಬರ ಪೀಡಿತ ಪ್ರದೇಶಗಳಲ್ಲಿ ಬರ ಅಧ್ಯಯನವನ್ನು ಮುಂದುವರೆಸಿತು.
ಗುಂಡ್ಲುಪೇಟೆ ತಾಲೂಕಿನ ಪರ್ವತನಪುರದ ದೇವಿರಮ್ಮ ಮಲ್ಲಿಯಯ್ಯ ಅವರ ಜಮೀನಿಗೆ ಭೇಟಿ ನೀಡಿ ಒಣಗಿದ ಬಾಳೆ ಬೆಳೆಯನ್ನು ವೀಕ್ಷಿಸಿ, ಅಧಿಕಾರಿಗಳಿಗೆ ಅಹವಾಲು ಸಲ್ಲಿಸಿದ ಜಮೀನಿನ ಮಾಲಿಕರು ಬೆಳೆಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದೇವೆ. ಮಳೆಯಿಲ್ಲದೆ ಫಸಲು ಬಂದಿಲ್ಲ, ತೊಂದರೆ ಅನುಭವಿಸುವಂತಾಗಿದೆ ನಮಗೆ ನೆರವು ಬರಬೇಕೆಂದು ಕೋರಿದರು.
ಹನೂರು ತಾಲೂಕಿಗೆ ಭೇಟಿ ನೀಡಿದ ತಂಡವು ಮೊದಲಿಗೆ ತಾಲೂಕಿನ ಹುಲ್ಲೇಪುರ ಗ್ರಾಮದ ರಾಜಮ್ಮಣ್ಣಿ ಅವರ ಜಮೀನನ್ನು ವೀಕ್ಷಿಸಿತು. ೨.೪ ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿ ಮಳೆಬಾರದ ಪರಿಣಾಮ ಬೆಳೆ ಮೊಳಕೆಯೊಡೆದ ಕೆಲವೇ ದಿನಗಳಲ್ಲಿ ಸಂಪೂರ್ಣ ಒಣಗಿ ಹೋಗಿದೆ. ಬಿತ್ತನೆಗಾಗಿ ಮಾಡಿದ ಸಾಲ ತೀರಿಸಲು ಇನ್ನೂ ಆಗಿಲ್ಲ. ಸೂಕ್ತ ಪರಿಹಾರ ಒದಗಿಸಬೇಕೆಂದು ರಾಜಮ್ಮಣ್ಣಿ ಕೋರಿದರು.
ತದನಂತರ ತಂಡವು ಹುಬ್ಬೆಹುಣಸೆ ಗ್ರಾಮದಲ್ಲಿ ರೈತರಾದ ಪ್ರಕಾಶ್ ಅವರ ಡೇರಿಗೆ ಭೇಟಿ ನೀಡಿ ವೀಕ್ಷಿಸಿತು.
ಇದೇ ವೇಳೆ ಶಾಸಕರಾದ ಎಂ.ಆರ್. ಮಂಜುನಾಥ್ ಸಹ ಹಾಜರಿದ್ದು ಹನೂರು ತಾಲೂಕಿನಲ್ಲಿ ತೀವ್ರ ಬರ ಪರಿಸ್ಥಿತಿ ಇದೆ. ಕೊಳವೆಬಾವಿ ಕೊರೆಸಿದರೂ ಅಂತರ್ಜಲ ಮಟ್ಟ ಕುಸಿದಿರುವುದರಿಂದ ನೀರು ಲಭ್ಯವಾಗುತ್ತಿಲ್ಲ. ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡಲಗುತ್ತಿದೆ. ಅತೀ ಹೆಚ್ಚು ಸಮಸ್ಯೆ ಎದುರಿಸುತ್ತಿರುವುದು ಹನೂರು ತಾಲೂಕು ಎಂದು ಬರ ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದರು.
ನಂತರ ಅಜ್ಜಿಪುರದಲ್ಲಿ ರೈತರಾದ ಮಲ್ಲೇಗೌಡ ಅವರ ಅರಿಶಿನ ಜಮೀನಿಗೆ ತಂಡ ಭೇಟಿ ಕೊಟ್ಟು ಪರಿಶೀಲಿಸಿತು. ರೈತರಾದ ಮಲ್ಲೇಗೌಡ ಅವರು ಮಾತನಾಡಿ ಬಿತ್ತನೆ ಬೀಜ, ಗೊಬ್ಬರ, ಕೂಲಿ ಸೇರಿದಂತೆ ಸುಮಾರು ೨ ಲಕ್ಷ ರೂ. ಖರ್ಚು ಮಾಡಿದ್ದೇನೆ. ಆದರೆ ಮಳೆಯಿಲ್ಲದೆ ಗೆಡ್ಡೆಗಳು ಹಾಳಾಗಿವೆ ಎಂದು ಹೇಳಿದರು.
ಇದೇ ವೇಳೆ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ಗಿರೀಶ್ ಅವರು ಮಾಹಿತಿ ನೀಡಿ ಹನೂರು ತಾಲೂಕಿನಲ್ಲೇ ೧,೮೦೦ ಎಕರೆ ಪ್ರದೇಶಷ್ಟು ತೋಟಗಾರಿಕೆ ಬೆಳೆ ಮಳೆ ಕೊರತೆಯಿಂದ ಹಾನಿಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ೧೩,೫೦೦ ಎಕರೆಯಷ್ಟು ತೋಟಗಾರಿಕೆ ಬೆಳೆ ನಷ್ಟವಾಗಿದೆ ಎಂದು ವಿವರಿಸಿದರು.
ಕೇಂದ್ರ ಅಧಿಕಾರಿಗಳ ತಂಡವು ಪುದುರಾಮಪುರ ಗ್ರಾಮಕ್ಕೆ ಭೇಟಿ ನೀಡಿ ವಿಬಿ ಜಿ ರಾಮ್ ಜಿ ಯೋಜನೆಯಡಿ ನಿರ್ವಹಿಸಲಾಗುತ್ತಿದ್ದ ಕಾಲುವೆ ಹೂಳೆತ್ತುವ ಕೆಲಸವನ್ನು ವೀಕ್ಷಿಸಿದರು.
ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ತಹಶೀಲ್ದಾರ್ ಚೈತ್ರ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಭಾನುಪ್ರಕಾಶ್, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕರಾದ ಮಂಜುನಾಥ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಇಮಾನ್ಯುವೆಲ್ ಸಂತೋಷ್, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
