ಮೈಸೂರು: ಮೈಸೂರು ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯ ವಾಸ್ತವ ಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡ ಆಗಮಿಸಿ ಪರಿಶೀಲನೆ ಪ್ರಾರಂಭಿಸಿದೆ.
ಕೇಂದ್ರ ಸರ್ಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಉಪ ಆಯುಕ್ತ ಸುಧಾಮ್ ಬೇಗ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪ ಸಲಹೆಗಾರ ಆಶಿಶ್ ಪಾಂಡೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಹಾಗೂ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಎಂ ಎನ್ ಸಿ ಎಫ್ ಸಿ ಉಪನಿರ್ದೇಶಕ ಕರಣ್ ಚೌಧರಿ ಅವರನ್ನೊಳಗೊಂಡ ತಂಡ ಸಾಲಿಗ್ರಾಮ ತಾಲ್ಲೂಕಿನ ಗೇರ್ದಡ ಮತ್ತು ಅರಕೆರೆ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಈ ವೇಳೆ ಅಪರ ಜಿಲ್ಲಾಧಿಕಾರಿ ಐಶ್ವರ್ಯ ಆರ್ ಹಾಗೂ ಜಂಟಿ ಕೃಷಿ ನಿರ್ದೇಶಕ ಕೆ.ಹೆಚ್. ರವಿ ಸೇರಿದಂತೆ ಜಿಲ್ಲಾ ಅಧಿಕಾರಿಗಳ ತಂಡ, ಮಳೆ ಕೊರತೆಯಿಂದ ಬೆಳೆಗಳಿಗೆ ಆಗಿರುವ ಹಾನಿ, ಬರಿದಾಗಿರುವ ಕೆರೆಗಳು ಮತ್ತು ಕುಡಿಯುವ ನೀರಿನ ಸಮಸ್ಯೆ ಕುರಿತು ಕೇಂದ್ರ ತಂಡಕ್ಕೆ ವಿವರ ನೀಡಿತು.
ಗೇರ್ದಡ ಗ್ರಾಮದಲ್ಲಿ ಹೊಗೆಸೊಪ್ಪು ಬೆಳೆ ಹಾನಿ ಹಾಗೂ ಅರಕೆರೆ ಗ್ರಾಮದಲ್ಲಿ ರಾಗಿ ಬೆಳೆ ಹಾನಿಯ ಕುರಿತು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಬಳಿಕ ಕೇಂದ್ರ ಅಧಿಕಾರಿಗಳ ತಂಡ ಅಧಿಕಾರಿಗಳೊಂದಿಗೆ ಚರ್ಚಿಸಿ, ಗ್ರಾಮಸ್ಥರನ್ನು ಭೇಟಿ ಮಾಡಿ ಬರ ಪರಿಸ್ಥಿತಿ ಬಗ್ಗೆ ಮಾಹಿತಿ ಸಂಗ್ರಹಿಸಿತು.
