ಕೊಳ್ಳೇಗಾಲ: ಚಾಮರಾಜನಗರ ಜಿಲ್ಲೆಯಲ್ಲಿ ಶೇಖರಣೆಯಾಗುತ್ತಿರುವ ಹಾಲಿಗೆ ಉತ್ತಮ ಬೇಡಿಕೆಯಿದೆ ಇದೆ ಎಂದು ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯ ಹಾಗೂ ಹೊರ ರಾಜ್ಯಗಳು ಹೊರ ದೇಶಗಳಲ್ಲಿಯೂ ಕೂಡ ಜಿಲ್ಲೆಯ ಕುದೇರು ಘಟಕದಲ್ಲಿ ಉತ್ಪಾದನೆ ಮಾಡುವ ನಂದಿನಿ ಹಾಲಿನ ಉತ್ಪನ್ನಗಳಿಗೆ ಉತ್ತಮ ಬೇಡಿಕೆಯಿದೆ ಎಂದು ಅವರು ತಿಳಿಸಿದರು.
ಕೊಳ್ಳೇಗಾಲ ತಾಲ್ಲೂಕಿನ ಸರಗೂರು ಹಾಲು ಉತ್ಪಾದಕರ ಸಹಕಾರ ಸಂಘದ 2025-26 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಹೈನುಗಾರಿಕೆ ಮಾಡುವ ರೈತರು ಹಾಲು ಉತ್ಪಾದಕರ ಸಂಘಕ್ಕೆ ಹೆಚ್ಚು ಸದಸ್ಯತ್ವವನ್ನು ಪಡೆದುಕೊಂಡು ಉತ್ತಮ ಗುಣ ಮಟ್ಟದ ಹಾಲು ಉತ್ಪಾದನೆಯಲ್ಲಿ ಇಳುವರಿ ಹೆಚ್ಚಿಸಿಕೊಂಡು ಸಹಕಾರ ಸಂಘದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳ ಬೇಕು ಎಂದು ಸಲಹೆ ನೀಡಿದರು.
ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸದಸ್ಯತ್ವ ಪಡೆದಿರುವ ರೈತರಿಗೆ ಹಸುಗಳಿಗೆ ಪೀಡ್ಸ್ ಅನ್ನು ಕೊಡಲಾಗುತ್ತದೆ. ಹಾಗೂ ವೈದ್ಯಕೀಯ ಸೌಲಭ್ಯವನ್ನು ನೀಡಲಾಗುತ್ತದೆ. ಹಸು ಏನಾದರು ಮರಣ ಹೊಂದಿದರೆ ಇನ್ಸೂರೆನ್ಸ್ ಮಾಡಿಸಿಕೊಡ ಲಾಗುತ್ತದೆ. ಆದ್ದರಿಂದ ರೈತರು ಉತ್ತಮ ಹಾಲಿನ ಇಳುವರಿಯನ್ನು ಹೆಚ್ಚಿಸಿಕೊಳ್ಳಬೇಕು ಹಾಲಿನ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬೇಕಾದರೆ ಹಸುವಿಗೆ ಯಾವ ಪ್ರಮಾಣದಲ್ಲಿ ಪೀಡ್ ಕೊಡಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳಬೇಕು. ಸರಿಯಾದ ಪ್ರಮಾಣದಲ್ಲಿ ಪೀಡ್ಸ್ ಹಾಗೂ ಮೇವನ್ನು ಕೊಡುತ್ತಾ ಬಂದರೆ ಉತ್ತಮ ಗುಣ ಮಟ್ಟದ ಹಾಲು ಕೊಡುತ್ತದೆ ಎಂದು ಸಲಹೆ ನೀಡಿದರು.
ಕುದೇರಿನಲ್ಲಿ ಚಾಮುಲ್ ಘಟಕ ಪ್ರಾರಂಭವಾಗ ಬೇಕಾದರೆ ಮಾಜಿ ಸಚಿವ ದಿ.ಹೆಚ್.ಎಸ್ ಮಹಾದೇವ ಪ್ರಸಾದ್ ಅವರ ಕೊಡುಗೆ ಅಪಾರವಾಗಿದೆ. ಮೊದಲು ಮೈಸೂರಿನ ಹಾಲು ಒಕ್ಕೂಟದ ಜೊತೆಗಿದ್ದ ಚಾಮುಲ್ ಅನ್ನು ಮಹಾದೇವ ಪ್ರಸಾದ್ ಅವರು ಸರ್ಕಾರಕ್ಕೆ ಬೇಡಿಕೆ ಇಟ್ಟು ಈ ಭಾಗದ ರೈತರ ಅನುಕೂಲಕ್ಕಾಗಿ ಚಾಮರಾಜನಗರ ಜಿಲ್ಲೆಗೆ ಹಾಲು ಉತ್ಪಾದಕರ ಘಟಕವನ್ನು ತಂದು ಕುದೇರಿನಲ್ಲಿ ಪ್ರಾರಂಭಿಸಿದರು. ಇಂದು ಕುದೇರು ಘಟಕದಲ್ಲಿ ಮೂರುವರೆ ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದೆ ಇದೆಲ್ಲಾ ಗ್ರಾಮೀಣ ಭಾಗದ ಹಾಲು ಉತ್ಪಾದಕರ ಶ್ರಮದಿಂದ ಎಂದು ನಂಜುಂಡಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಭುಸ್ವಾಮಿ ಅವರು ಸರಗೂರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 170 ಜನ ಸದಸ್ಯರು ಡೈರಿಗೆ ಹಾಲು ಹಾಕುತ್ತಿದ್ದಾರೆ. 2200 ಲೀಟರ್ ಹಾಲು ಶೇಖರಣೆಯಾಗುತ್ತಿದೆ. ಒಂದು ವರ್ಷದ ಅವಧಿಯಲ್ಲಿ 73000 ರೂ. ಲಾಭಾಂಶ ಬಂದಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಗುರುಶಂಕರರಾದ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಬಿ. ಶ್ರೀಧರ್, ಕುದೇರು ಘಟಕದ ಪ್ರಭಾರ ವ್ಯವಸ್ಥಾಪಕ ಶರತ್ ಕುಮಾರ್, ವಿಸ್ತರಣಾಧಿಕಾರಿ ಸೋಮಶೇಖರ್. ಶ್ರೀನಿವಾಸ್ ಪ್ರಸಾದ್, ಮತ್ತಿತರರು ಹಾಜರಿದ್ದರು.
