ಮೈಸೂರು: ಸಕಾಲದಲ್ಲಿ ಬೆಳೆ ಸಾಲ ನೀಡುತ್ತಿಲ್ಲ ಎಂದು ಆರೋಪಿಸಿ ಪಿರಿಯಾಪಟ್ಟಣ-ಹುಣಸೂರು ತಾಲೂಕುಗಳ ರೈತರು ಮೈಸೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ಸಾಲ ಸಿಗದೆ ನೊಂದ ರೈತನೊಬ್ಬ ವಿಷದ ಬಾಟಲಿ ಹಿಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆದು, ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಬಾಟಲಿಯನ್ನು ವಶಕ್ಕೆ ಪಡೆದು ಅನಾಹುತ ತಪ್ಪಿಸಿದರು.
ಬೆಳೆ ಸಾಲವನ್ನು ಮರುಪಾವತಿ ಮಾಡಿದರೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಎಂಡಿಸಿಸಿ ಬ್ಯಾಂಕ್ ಅಧಿಕಾರಿಗಳು ಹೊಸ ಸಾಲ ನೀಡಲು ನಿರಾಕರಿಸುತ್ತಿದ್ದಾರೆ. ಸಾಲ ತೀರಿಸಿದ್ದರೂ ಮತ್ತೆ ಬಾಕಿ ಇದೆ ಎಂದು ನೋಟಿಸ್ ನೀಡಿ ರೈತರನ್ನು ಗೊಂದಲಕ್ಕೀಡು ಮಾಡುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಸಾಲ ವಿತರಣೆಯಲ್ಲಿ ರಾಜಕೀಯ ಹಸ್ತಕ್ಷೇಪ ಮತ್ತು ಪಕ್ಷಪಾತ ನಡೆಯುತ್ತಿದೆ. ಲಂಚ ಮತ್ತು ರಾಜಕೀಯ ಒತ್ತಡಕ್ಕೆ ಮಣಿದು ಕೆಲವರಿಗೆ ಮಾತ್ರ ತಕ್ಷಣ ಸಾಲ ನೀಡಲಾಗುತ್ತಿದೆ, ಎಂಡಿಸಿಸಿ ಬ್ಯಾಂಕ್ ಅಧಿಕಾರಿಗಳು ಪಿರಿಯಾಪಟ್ಟಣ ಶಾಸಕರ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದರು.
ತಾಳಿ ಮಾರಿ ಸಾಲ ತೀರಿಸಿದ್ದೇವೆ ಪ್ರತಿಭಟನೆಯಲ್ಲಿ ಮಾತನಾಡಿದ ರೈತರು, ತಾಳಿ ಮಾರಿ ಬ್ಯಾಂಕ್ ಸಾಲ ತೀರಿಸಿದ್ದೇವೆ. ಬ್ಯಾಂಕ್ ಸಾಲವನ್ನೇ ನಂಬಿ ಕೃಷಿ ಮಾಡುತ್ತಿದ್ದೇವೆ. ಆದರೆ ಈಗ ಹೊಸ ಸಾಲ ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹುಣಸೂರು ಶಾಸಕ ಜಿ.ಡಿ. ಹರೀಶ್ ಗೌಡ, ರೈತರ ಮನವೊಲಿಸಿ, ಆತ್ಮಹತ್ಯೆಯಂತಹ ನಿರ್ಧಾರ ಕೈಗೊಳ್ಳಬೇಡಿ ಎಂದು ಸಮಾಧಾನಪಡಿಸಿದರು. ರೈತರ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕೆ. ಮಹದೇವ್, ಮೈಮುಲ್ ಮಾಜಿ ಅಧ್ಯಕ್ಷ ಪ್ರಸನ್ನ ಸೇರಿದಂತೆ ಪಿರಿಯಾಪಟ್ಟಣ ಮತ್ತು ಹುಣಸೂರು ಭಾಗದ ಹಲವು ರೈತ ಮುಖಂಡರು ಭಾಗವಹಿಸಿದ್ದರು.
