ಯಳಂದೂರು: ಇಡೀ ವಿಶ್ವಕ್ಕೆ ಭಾರತ ಮಾದರಿ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಬಣ್ಣಿಸಿದರು.
ಯಳಂದೂರು ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ತಾಲೂಕು ಅಡಳಿತ, ತಾಲೂಕು ಪಂಚಾಯಿತಿ ಸಮಾಜ ಕಲ್ಯಾಣ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ, ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು
ಮಾತನಾಡಿದರು.
ಇಡೀ ವಿಶ್ವಕ್ಕೆ ಭಾರತ ಮಾದರಿಯಾಗಿದೆ ಇದಕ್ಕೆ ಸಾಕ್ಷಿಯಾಗಿ ನಮ್ಮ ಸಂವಿಧಾನ ನಿಂತಿದೆ,ನಮ್ಮಪ್ರಜಾಪ್ರಭುತ್ವ ವ್ಯವಸ್ಥೆಯನ್ನು ವಿಶ್ವದ ಅನೇಕ ದೇಶಗಳು ಅಳವಡಿಸಿಕೊಂಡಿವೆ. ಆದರೂ ಪ್ರಬಲವಾದ ಪ್ರಜಾಪ್ರಭುತ್ವ ಭಾರತದ್ದು ಎಂಬುದನ್ನು ಹೇಳಿಕೊಳ್ಳಲು ನಮಗೆ ಹೆಮ್ಮೆ ಎಂದು ನುಡಿದರು.
ಡಾ.ಬಿ.ಆರ್. ಅಂಬೇಡ್ಕರ್ ವಿರಚಿತ ಸಂವಿಧಾನದಲ್ಲಿ ರಾಜಪ್ರಭುತ್ವದ ಅನೇಕ ನ್ಯೂನತೆಗಳನ್ನು ತೊಡೆದು ಇಲ್ಲಿ ಪ್ರಜೆಗಳೇ ಪ್ರಭುಗಳು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ನಮ್ಮ ದೇಶ ಇಷ್ಟೊಂದು ಪ್ರಗತಿಯನ್ನು ಸಾಧಿಸಿರುವುದು ಪ್ರಜಾಪ್ರಭುತ್ವದ ತಳಹದಿಯಲ್ಲೇ ಆಗಿದೆ ಪ್ರಜಾಪ್ರಭುತ್ವದಲ್ಲಿ ಪ್ರತಿ ವ್ಯಕ್ತಿಯೂ ಸಾರ್ವಭೌಮನಾಗಿದ್ದಾನೆ. ಇದರಲ್ಲಿ ಬರುವ ಅಧಿಕಾರ ಶ್ರೇಣಿಕೃತ ಪದ್ಧತಿಯೂ ಒಂದಕ್ಕೊಂದು ಕೊಂಡಿಯತೆ ಕೊಡಿಕೊಂಡಿರುತ್ತದೆ. ಜಗತ್ತಿನ ಬಹುತೇಕ ರಾಷ್ಟಗಳು ಇದನ್ನು ಅಳವಡಿಸಿಕೊಂಡು ಉತ್ತಮ ಆಡಳಿತ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಮುಖ್ಯ ಭಾಷಣಕಾರರಾದ ಉಪನ್ಯಾಸಕಿ ಶ್ವೇತಾ ಪ್ರಜಾಪ್ರಭುತ್ವದ ಮಹತ್ವ,ಅದು ಬೆಳೆದುಕೊಂಡು ಬಂದ ಬಗೆ, ಪ್ರಸ್ತುತ ಇದರ ಅಗತ್ಯತೆ, ಇದರಲ್ಲಿ ಅಡಕವಾಗಿರುವ ಒಳ್ಳೆಯ ಅಂಶಗಳು, ಇದನ್ನು ಬಳಸಿಕೊಂಡು ಬಂದಿರುವ ದೇಶದ ಸ್ಥಿತಿಗತಿಗಳು, ನಮ್ಮ ದೇಶ ಸಾಧಿಸಿರುವ ಪ್ರಗತಿ ಕುರಿತು ವಿಸ್ತೃತ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎಸ್.ಎಲ್. ನಯನ, ತಾಪಂ ಇಒ ಎ.ಬಿ. ವೇಣು, ಪಪಂ ಮುಖ್ಯಾಧಿಕಾರಿ ಎಂ.ಪಿ. ಮಹೇಶ್ಕುಮಾರ್, ಬಿಇಒ ಮಾರಯ್ಯ, , ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವಮೂರ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
