ಮೈಸೂರು: ಸಾಹಸಸಿಂಹ, ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ಅವರ 76ನೇ ಜನ್ಮದಿನಾಚರಣೆಯನ್ನು ಸೆಪ್ಟೆಂಬರ್ 18ರಂದು ಬೆಳಗ್ಗೆ 11.30ಕ್ಕೆ ಅದ್ಧೂರಿ ಹಾಗೂ ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದು
ಡಾ. ವಿಷ್ಣು ಸ್ಮಾರಕ ಸೇನಾ ಸಮಿತಿಯ ಅಧ್ಯಕ್ಷ ಬೆಂಕಿ ಮಹದೇವ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಈ ಕುರಿತು ಮಾಹಿತಿ ನೀಡಿದ ಅವರು,18 ರಂದು ಉದ್ಬೂರ್ ಗೇಟ್ ಸಮೀಪ ಇರುವ ಡಾ. ವಿಷ್ಣುವರ್ಧನ್ ಸ್ಮಾರಕದಲ್ಲಿ 5,000ಕ್ಕೂ ಹೆಚ್ಚು ಅಭಿಮಾನಿಗಳಿಗೆ ಸಾಂಪ್ರದಾಯಿಕ ಹೊಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಜತೆಗೆ ಲಯನ್ಸ್ ಜೀವದಾರ ರಕ್ತ ನಿಧಿ ಕೇಂದ್ರದ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಸಹ ಆಯೋಜಿಸಲಾಗಿದೆ
ಎಂದು ಹೇಳಿದರು.
ಕನ್ನಡ ಚಿತ್ರರಂಗದ ಮೇರು ನಟ, ಲಕ್ಷಾಂತರ ಅಭಿಮಾನಿಗಳ ಆರಾಧ್ಯ ದೈವವಾಗಿರುವ ಡಾ. ವಿಷ್ಣುವರ್ಧನ್ ಅವರ ಜನ್ಮದಿನವನ್ನು ಪ್ರತಿವರ್ಷದಂತೆ ಈ ಬಾರಿಯೂ ಡಾ. ವಿಷ್ಣು ಸ್ಮಾರಕ ಸೇವಾ ಸಮಿತಿ ವತಿಯಿಂದ ಸೇವಾ ಕಾರ್ಯಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಡಾ. ವಿಷ್ಣುವರ್ಧನ್ ಅವರು ಕೇವಲ ಶ್ರೇಷ್ಠ ನಟರಷ್ಟೇ ಅಲ್ಲ, ಸಮಾಜಮುಖಿ ಚಿಂತನೆ, ಮಾನವೀಯ ಮೌಲ್ಯಗಳು ಹಾಗೂ ಸರಳ ವ್ಯಕ್ತಿತ್ವದ ಮೂಲಕ ಜನಮನ ಗೆದ್ದ ಮಹಾನ್ ವ್ಯಕ್ತಿತ್ವದವರಾಗಿದ್ದರು. ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಜನ್ಮದಿನಾಚರಣೆಯನ್ನು ವಿಶೇಷವಾಗಿ ಆಯೋಜಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ವಿಶೇಷ ಪೂಜೆ, ಪುಷ್ಪಾರ್ಚನೆ, ಸ್ಮರಣಾ ಕಾರ್ಯಕ್ರಮ, ಅನ್ನಸಂತರ್ಪಣೆ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮಾಡುವ ಮೂಲಕ ಅಭಿಮಾನಿಗಳ ಸಮಾಗಮ ನಡೆಯಲಿದ್ದು, ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಅಭಿಮಾನಿಗಳು ಆಗಮಿಸುವ ನಿರೀಕ್ಷೆಯಿದೆ ಎಂದು ಬೆಂಕಿ ಮಹದೇವ್ ತಿಳಿಸಿದರು.
ಈ ಸಂದರ್ಭದಲ್ಲಿ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಕಲಾ ಸೇವೆ, ಕನ್ನಡ ಚಿತ್ರರಂಗಕ್ಕೆ ನೀಡಿದ ಅಮೋಘ ಕೊಡುಗೆ ಹಾಗೂ ಸಮಾಜಮುಖಿ ಕಾರ್ಯಗಳನ್ನು ಸ್ಮರಿಸಲಾಗುವುದು. ವಿವಿಧ ಕ್ಷೇತ್ರಗಳ ಗಣ್ಯರು, ಕಲಾವಿದರು, ಸಮಾಜಸೇವಕರು, ಸಂಘ-ಸಂಸ್ಥೆಗಳ ಮುಖಂಡರು ಹಾಗೂ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಾಸಕರುಗಳಾದ ಜಿ.ಟಿ. ದೇವೇಗೌಡ, ಜಿ.ಡಿ. ಹರೀಶ್ ಗೌಡ , ಟಿ ಎಸ್ ಶ್ರೀವತ್ಸ , ಮಾಜಿ ಶಾಸಕ ನಾಗೇಂದ್ರ, ಕಾಂಗ್ರೆಸ್ ಮುಖಂಡರಾದ ಚೇತನ್, ವಿಷಕಂಠ, ಊರಿಗೆ ಉಪಕಾರಿ ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಎಂ ಜಿ ಆರ್ ಮಣಿ, ಹಾಗೂ ಖ್ಯಾತ ಚಲನಚಿತ್ರ ನಟ ಸುಂದರ್ ರಾಜ್ ಸೇರಿದಂತೆ ಹಲವಾರು ಗಣ್ಯರು ಆಗಮಿಸಲಿದ್ದು, ಚಲನಚಿತ್ರ ಮತ್ತು ರಂಗಭೂಮಿ ಕ್ಷೇತ್ರದ ಹಲವು ಕಲಾವಿದರು ಸಹ ಉಪಸ್ಥಿತರಿರಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟಕರು, ಡಾ. ವಿಷ್ಣುವರ್ಧನ್ ಅವರ ಜನ್ಮದಿನವನ್ನು ಕೇವಲ ಆಚರಣೆಯಾಗಿ ಮಾತ್ರವಲ್ಲದೆ, ಸಮಾಜ ಸೇವೆಯ ಸಂಕಲ್ಪದೊಂದಿಗೆ ನಡೆಸಲಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಡಾ. ವಿಷ್ಣು ಸ್ಮಾರಕ ಸೇನಾ ಸಮಿತಿಯ ಗೌರವಾಧ್ಯಕ್ಷೆ ಶಾಂತಕುಮಾರಿ, ಎಂ ಡಿ ಪಾರ್ಥಸಾರಥಿ, ಉಪಾಧ್ಯಕ್ಷ ಸಂತೋಷ್ ಎಸ್, ಪ್ರಧಾನ ಕಾರ್ಯದರ್ಶಿ ರಾಜು ಎಸ್.ಆರ್, ಸಹ ಕಾರ್ಯದರ್ಶಿ ಮಹದೇವಸ್ವಾಮಿ, ಮಾರ್ಗದರ್ಶಕರಾದ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
