ಬನ್ನೂರು: ಬನ್ನೂರು ಭುವನೇಶ್ವರಿ ಕನ್ನಡ ಸಂಘದ ವತಿಯಿಂದ ಬನ್ನೂರು ವೃತ್ತದಲ್ಲಿ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಜಯಂತಿ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸಲಾಯಿತು.
ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಸಿ ಜಿ ಗಂಗಾಧರ್ ಅವರು ಮಾತನಾಡಿ ನಮ್ಮ ನಾಡು, ದೇಶ ಕಂಡ ಮಹಾನ್ ಇಂಜಿನಿಯರ್, ಸರಳ ವ್ಯಕ್ತಿತ್ವದ ವ್ಯಕ್ತಿ, ತಮ್ಮ ಬುದ್ದಿವಂತಿಕೆ ಹಾಗೂ ಕೆಲಸದಿಂದಲೇ ವಿಶ್ವ ವಿಖ್ಯಾತರಾದವರು ಎಂದು ಬಣ್ಣಿಸಿದರು.
ಅದರಲ್ಲೂ ವಿಶೇಷವಾಗಿ ಬ್ರಿಟೀಷರಿಂದ ಸರ್ ಎಂಬ ಬಿರುದನ್ನು ಪಡೆದವರು. ಮುಂಬೈ ನಲ್ಲಿ ಚಾಕಚಕ್ಯತೆಯಿಂದ ಕೆಲಸ ಮಾಡುತ್ತಿದ್ದ ವಿಶ್ವೇಶ್ವರಯ್ಯನವರನ್ನು ಮೈಸೂರಿಗೆ ಕರೆಯಿಸಿಕೊಂಡ ನಾಲ್ವಡಿ ಅವರು ಕನ್ನಂಬಾಡಿ ಕಟ್ಟೆಯ ಉಸ್ತುವಾರಿ ನೀಡಿ, ಕಟ್ಟೆಯನ್ನು ಅದ್ಬುತವಾಗಿ ನಿರ್ಮಾಣ ಮಾಡಿದರು ಎಂದು ತಿಳಿಸಿದರು.
ಕೋಟ್ಯಂತರ ಇಂಜಿನೀಯರ್ ಗಳು ದೇಶದಲ್ಲಿ ಇದ್ದರೂ ಸರ್ ಎಂ ವಿಶ್ವೇಶ್ವರಯ್ಯ ಅವರು ಹುಟ್ಟಿದ ದಿನವನ್ನು ಸರ್ಕಾರ ಇಂಜಿನೀಯರ್ ದಿನಾಚರಣೆ ಆಚರಣೆ ಮಾಡಲಾಗುತ್ತದೆ ಎಂದರೆ ಅವರ ಕೊಡುಗೆ, ಸಾಧನೆಗಳು ಅಪಾರ. ಇವರ ಪ್ರಾಮಾಣಿಕ, ನಿಸ್ವಾರ್ಥ ಸೇವೆಯಿಂದಲೇ ಇವರಿಗೆ ಭಾರತ ರತ್ನ ಪ್ರಶಸ್ತಿ ನೀಡಿರುವುದು, ನಮಗೆ, ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಇಂತಹ ಮಹನೀಯರ ತತ್ವ, ಆದರ್ಶಗಳನ್ನು ಈಗಿನ ಇಂಜಿನೀಯರ್ ಗಳು ಅಳವಡಿಸಿಕೊಳ್ಳಬೇಕು ಎಂದು ಗಂಗಾಧರ್ ಸಲಹೆ ನೀಡಿದರು.
ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಮಾತನಾಡಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಇಂಜಿನೀಯರ್ ಆಗಿ ಬಂದ ವಿಶ್ವೇಶ್ವರಯ್ಯರವರು ಕನ್ನಂಬಾಡಿ ಕಟ್ಟೆ ಸೇರಿದಂತೆ ಹಲವಾರು ಅಣೆಕಟ್ಟುಗಳು ಹಾಗೂ ರಸ್ತೆಗಳ ನಿರ್ಮಾಣಕ್ಕೆ ಕಾರಣರಾದರು. ಮಹಾರಾಜರ ಸಹಕಾರದಿಂದ ಅನೇಕ ಕೈಗಾರಿಕೆಗಳು, ವಿದ್ಯುಚ್ಛಕ್ತಿ ಸ್ಥಾವರ,ಮೈಸೂರು ಬ್ಯಾಂಕ್ ಸೇರಿದಂತೆ ಹಲವು ಯೋಜನೆ ಮಾಡಿದರು. ಇಂತಹ ಮಹನೀಯರ ದಿನಾಚರಣೆಯನ್ನು ಮುಂದಿನ ವರ್ಷದಿಂದ ಸರ್ಕಾರ ಜಿಲ್ಲಾಡಳಿತದ ವತಿಯಿಂದ ಆಚರಣೆ ಮಾಡಬೇಕು ಎಂದು ಆಗ್ರಹಿಸಿದರು.
ಬನ್ನೂರ ರಾಮಸ್ವಾಮಿ ಅವರು ಜನಸ್ತೋಮಕ್ಕೆ ಬಾತ್ ವಿತರಿಸಿದರು.
ಕಾರ್ಯಕ್ರಮ ದಲ್ಲಿ ರಾಮಚಂದ್ರ,ಹೊಂಬೇ ಗೌಡ,ಕೃಷ್ಣಪ್ಪ, ಶಿವಲಿಂಗಯ್ಯ, ವರಕೂಡು ಕೃಷ್ಣೇಗೌಡ, ಹನುಮಂತ, ತಾಯೂರ್ ಗಣೇಶ್, ಪ್ರಭಾಕರ್, ತ್ಯಾಗರಾಜ್, ರಾಮಕೃಷ್ಣೇಗೌಡ, ಕುಮಾರ್ ಗೌಡ, ನಂದಕುಮಾರ್, ರಘು ಮತ್ತಿತರರು ಪಾಲ್ಗೊಂಡಿದ್ದರು.
