ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಮತ್ತೆ ಸರಗಳ್ಳತನ ಸದ್ದು ಮಾಡಿದೆ.
ವೃದ್ದೆಯೊಬ್ಬರ ಚಿನ್ನದ ಸರ ಕೀಳಲು ಹೋದ ಕಳ್ಳರು ಬರಿಗೈನಲ್ಲಿ ತೆರಳಿದ ಘಟನೆ ಮೇಟಗಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹಾಲು ತರಲು ತೆರಳುತ್ತಿದ್ದ ವೃದ್ದೆಯ ಕುತ್ತುಗೆಗೆ ಕೈಹಾಕಿ ಚಿನ್ನದ ಚೈನ್ ಕಿತ್ತುಕೊಳ್ಳಲು ಆಟೋದಲ್ಲಿ ಬಂದ ಕಿಡಿಗೇಡಿಗಳು ಯತ್ನಿಸಿದ್ದಾರೆ
ಆದರೆ ಆಕೆ ಎರಡೂ ಕೈಗಳಿಂದ ಸರವನ್ನು ಭದ್ರವಾಗಿ ಹಿಡಿದ ಕಾರಣ ಕಳ್ಳರು ಏನೂ ಮಾಡಲಾಗದೆ ಹೋಗಿದ್ದಾರೆ.
ಮಥುರಾ ನಗರದ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು ಕಮಲಾಕ್ಷಮ್ಮ(85) ಎಂಬುವರ ಚಿನ್ನದ ಸರ ಕಸಿಯಲು ಕಳ್ಳರು ಯತ್ನಿಸಿದ್ದಾರೆ.
ಕಮಲಾಕ್ಷಮ್ಮ ಎರಡು ಕೈಗಳಲ್ಲೂ ಸರವನ್ನ ಭದ್ರವಾಗಿ ಹಿಡಿದು ಕೂಗಾಡಿದ್ದಾರೆ,ಆಕೆಯ ಕೂಗಿನ ಶಬ್ದ ಕೇಳಿ ಅಕ್ಕಪಕ್ಕದ ನಿವಾಸಿಗಳು ಧಾವಿಸಿ ಬಂದಾಗ ಕಿಡಿಗೇಡಿಗಳು ಪರಾರಿಯಾಗಿದ್ದಾರೆ.
ಚಿನ್ನದ ಸರ ಎರಡು ಭಾಗವಾಗಿ ಕಮಲಾಕ್ಷಮ್ಮ ಅವರ ಕೈನಲ್ಲೇ ಉಳಿದುಕೊಂಡಿದೆ.
ಸ್ಥಳಕ್ಕೆ ಮೇಟಗಳ್ಳಿ ಠಾಣೆ ಇನ್ಸ್ಪೆಕ್ಟರ್ ಅರುಣ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಮಾಹಿತಿ ಪಡೆದಿದ್ದು ಕಮಲಾಕ್ಷಮ್ಮ ಅವರಿಗೆ ದೈರ್ಯ ಹೇಳಿದ್ದಾರೆ ಖದೀಮರ ಪತ್ತೆಗೆ ಬಲೆ ಬೀಸಿದ್ದಾರೆ.
