ಮೈಸೂರು: ಗಣೇಶೋತ್ಸವ ಎಂದರೆ ಕೇವಲ ಮನೆಮನೆಗಳಲ್ಲಿ ಗಣಪತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವ ಹಬ್ಬವಲ್ಲ,ಅದು ಭಕ್ತಿ, ಸಂಭ್ರಮ, ಸಂಸ್ಕೃತಿ, ಪರಂಪರೆ ಹಾಗೂ ಸಮಾಜದ ಒಗ್ಗಟ್ಟನ್ನು ಸಾರುವ ಅಪೂರ್ವ ಸಂದರ್ಭವಾಗಿದೆ ಎಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದರು
ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮೈಸೂರು ಸಾರ್ವಜನಿಕ ಗಣೇಶ ವಿಸರ್ಜನಾ ಸಮಿತಿ ವತಿಯಿಂದ ಸೆ. 20ರಂದು ನಡೆಯಲಿರುವ 23ನೇ ವರ್ಷದ ಗಣೇಶ ವಿಸರ್ಜನಾ ಮೆರವಣಿಗೆಯ ಪೋಸ್ಟರ್ ಬಿಡುಗಡೆ ವೇಳೆ ಶ್ರೀಗಳು ಮಾತನಾಡಿದರು.
ಗಣೇಶೋತ್ಸವದಂತಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜವನ್ನು ಒಗ್ಗೂಡಿಸುವ ಶಕ್ತಿಯನ್ನು ಹೊಂದಿವೆ ಎಂದು ತಿಳಿಸಿದರು.
ಹಿಂದೂಗಳೆಲ್ಲರೂ ಒಂದಾಗುವ ಒಂದು ಸದವಕಾಶ ಇದು. ಬನ್ನಿ, ಎಲ್ಲರೂ ಒಂದಾಗಿ ಸೇರೋಣ ಎಂಬ ಸಂದೇಶದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವಂತೆ ಶ್ರೀಗಳು ಕರೆ ನೀಡಿದರು.
ಹಿಂದೂಗಳ ಭಾವೈಕ್ಯತೆಯ ಪ್ರತೀಕವಾಗಿ ಆಯೋಜಿಸಲಾಗುತ್ತಿರುವ ಈ ಬೃಹತ್ ಗಣೇಶ ವಿಸರ್ಜನಾ ಮೆರವಣಿಗೆಗೆ ಈಗಾಗಲೇ ಸಿದ್ಧತೆಗಳು ಆರಂಭವಾಗಿದ್ದು, ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಆಶೀರ್ವಾದ ಹಾಗೂ ಮಾರ್ಗದರ್ಶನದಿಂದ ಭಕ್ತರಲ್ಲಿ ವಿಶೇಷ ಉತ್ಸಾಹ ಮೂಡಿದೆ.
ಮೈಸೂರು ಸಾರ್ವಜನಿಕ ಗಣೇಶ ವಿಸರ್ಜನಾ ಸಮಿತಿಯ ಸದಸ್ಯ ಎಚ್.ಜಿ. ಗಿರಿಧರ್ ಮಾತನಾಡಿ, ಸೆ. 20ರಂದು ಭಾನುವಾರ ಗಣೇಶ ವಿಸರ್ಜನಾ ಮೆರವಣಿಗೆ ನಡೆಯಲಿದ್ದು, ಮಧ್ಯಾಹ್ನ 1.45ಕ್ಕೆ ವಿಜಯನಗರದ ವೀರಗಣಪತಿ ದೇವಸ್ಥಾನದಿಂದ ಮೆರವಣಿಗೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.
23ನೇ ವರ್ಷಕ್ಕೆ ಕಾಲಿಟ್ಟಿರುವ ಈ ಗಣೇಶ ವಿಸರ್ಜನಾ ಮೆರವಣಿಗೆ ವರ್ಷದಿಂದ ವರ್ಷಕ್ಕೆ ಭಕ್ತರ ಪಾಲ್ಗೊಳ್ಳುವಿಕೆ ಹಾಗೂ ವೈಭವದಲ್ಲಿ ಹೆಚ್ಚಳ ಕಾಣುತ್ತಿದೆ. ಸಾವಿರಾರು ಭಕ್ತರು ಒಂದೆಡೆ ಸೇರಿ ಗಣಪತಿಯ ನಾಮಸ್ಮರಣೆಯೊಂದಿಗೆ ಸಾಗುವ ಮೆರವಣಿಗೆ ನಗರದಾದ್ಯಂತ ಹಬ್ಬದ ವಾತಾವರಣ ನಿರ್ಮಿಸಲಿದೆ ಎಂದು ಆಯೋಜಕರು ವಿಶ್ವಾಸ ವ್ಯಕ್ತಪಡಿಸಿದರು.
“ಒಗ್ಗಟ್ಟೇ ಈ ಉತ್ಸವದ ದೊಡ್ಡ ಸಂದೇಶ” ಎಂಬ ಆಶಯದೊಂದಿಗೆ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸಮಿತಿ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಕಿರಿಯ ಶ್ರೀ ಗಳಾದ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರು ಆಶೀರ್ವಾದ ನೀಡಿದರು.
ಈ ವೇಳೆ ಸಮಿತಿಯ ಸದಸ್ಯರಾದ ಎಚ್.ಜಿ. ಗಿರಿಧರ್, ಸೂ ಮುರುಳಿ, ಜೋಗಿ ಮಂಜು, ವಿಕಾಸ್ ಶಾಸ್ತ್ರಿ, ಸ್ಮಾರ್ಟ್ ಮಂಜು, ಆನಂದ್, ವೇಲು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
