ಬೆಂಗಳೂರು: ಸಾಲ ಮನ್ನಾ ಮಾಡಿ ಎಂದರೆ ಕೇಂದ್ರ ಸರ್ಕಾರದ ಕಡೆಗೆ ಬೆಟ್ಟು ತೋರಿಸಿ ನುಣುಚಿಕೊಳ್ಳುವುದು ಯಾವ ಸೀಮೆ ಆಡಳಿತ ಸಿಎಂ ಡಿ.ಕೆ.ಶಿವಕುಮಾರ್ ಅವರೇ
ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್
ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ
ನಿಮ್ಮ ನಾಲಾಯಕ್ ಸರ್ಕಾರದ ಹೊಣೆಗೇಡಿತನ ಮತ್ತು ನೈತಿಕ ಅಧಃಪತನಕ್ಕೆ ಕೊನೆ ಎಂಬುದೇ ಇಲ್ಲವೇ ಎಂದು ಅಶೋಕ ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ಕರ್ನಾಟಕದಲ್ಲಿ ನಿಮ್ಮದೇ ಪಕ್ಷದ ಸರ್ಕಾರ ಸೇರಿದಂತೆ ಅನೇಕ ಬಾರಿ ಅಗತ್ಯಕ್ಕೆ ತಕ್ಕಂತೆ ರಾಜ್ಯ ಸರ್ಕಾರಗಳೇ ರೈತರ ಸಾಲ ಮನ್ನಾ ಮಾಡಿ ನೆರವಿಗೆ ನಿಂತಿವೆ. ಆದರೆ ಇವತ್ತು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಕೇಂದ್ರದತ್ತ ಬೆರಳು ತೋರಿಸುವ ನಿಮಗೆ ನಿಜಕ್ಕೂ ನಾಚಿಕೆಯಾಗಬೇಕು ಎಂದು ಛೀಮಾರಿ ಹಾಕಿದ್ದಾರೆ.
2023ರ ಚುನಾವಣೆಯಲ್ಲಿ ನಿಮ್ಮ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಕೊಚ್ಚಿಕೊಂಡಿದ್ದ ಆ ಪೊಳ್ಳು ಭರವಸೆಗಳಾದ
1.50 ಲಕ್ಷ ಕೋಟಿಯ ‘ಕೃಷಿ ಸರ್ವೋದಯ ನಿಧಿ’ ಎಲ್ಲಿ ಹೋಯಿತು?
5,000 ಕೋಟಿಯ ‘ಶಾಶ್ವತ ಪ್ರಕೃತಿ ವಿಕೋಪ ನಿಧಿ’ ಎಲ್ಲಿ ಮಾಯವಾಯಿತು?
3 ಲಕ್ಷದಿಂದ 10 ಲಕ್ಷದವರೆಗೆ ಬಡ್ಡಿ ರಹಿತ ಕೃಷಿ ಸಾಲ ನೀಡುತ್ತೇವೆ ಎಂದಿದ್ದೀರಲ್ಲ, ಆ ಭರವಸೆಯ ಕಥೆ ಏನಾಯ್ತು ಎಂದು ಅಶೋಕ ಕೇಳಿದ್ದಾರೆ.
ಚುನಾವಣೆಗೂ ಮುನ್ನ ‘ಕರಪತ್ರ’ ಹಿಡಿದು ರೈತರಿಗೆ ಅಂಗೈಯಲ್ಲಿ ಅರಮನೆ ತೋರಿಸಿ, ಅಧಿಕಾರಕ್ಕೆ ಬಂದ ಮೇಲೆ ಖಜಾನೆ ಖಾಲಿ ಮಾಡಿ, ಈಗ “ಕೇಂದ್ರ ಸರ್ಕಾರ ಮಾಡಲಿ” ಎಂದು ಜಾರಿಕೊಳ್ಳುವುದು ಹೊಣೆಗೇಡಿತನದ ಪರಮಾವಧಿ.
ನಿಮಗೆ ನಿಜವಾಗಿಯೂ ರೈತರ ಮೇಲೆ ಕಾಳಜಿ ಇದ್ದರೆ, ಮೊದಲು ರಾಜ್ಯ ಸರ್ಕಾರದ ಹಂತದಲ್ಲೇ ಸಾಲ ಮನ್ನಾ ಘೋಷಿಸಿ! ನಿಮ್ಮ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ 5,000 ಕೋಟಿ ಪ್ರಕೃತಿ ವಿಕೋಪ ನಿಧಿ ಅಡಿಯಲ್ಲಿ ಪರಿಹಾರ ಬಿಡುಗಡೆ ಮಾಡಿ ಎಂದು ಅವರು ಆಗ್ರಹಿಸಿದ್ದಾರೆ.
