ಚೈನಾ: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ
ಚೀನಾದಲ್ಲಿ 52 ಸಿಂಗಾಪುರ ಪ್ರಜೆಗಳನ್ನು ಬಂಧಿಸಲಾಗಿದ್ದು,ವಿಶ್ವದಲ್ಲಿ ಸಂಚಲನ ಮೂಡಿಸಿದೆ.
ಚೀನಾದ ಗುವಾಂಗ್ಸಿಯಲ್ಲಿ ಭಾರಿ ವಂಚನೆಯ ಪಿರಮಿಡ್ ಸ್ಕೀಮ್ ಹಗರಣ ನಡೆಸುತ್ತಿದ್ದ ಆರೋಪದ ಮೇಲೆ 52 ಸಿಂಗಾಪುರ ನಾಗರಿಕರನ್ನು ಚೀನಾ ಪೊಲೀಸರು ಬಂಧಿಸಿದ್ದಾರೆ.
ವಿದೇಶವೊಂದರಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ಸಿಂಗಾಪುರದ ಪ್ರಜೆಗಳು ಒಟ್ಟಿಗೆ ಬಂಧನಕ್ಕೊಳಗಾಗಿರುವುದು ಇತಿಹಾಸದಲ್ಲೇ ಇದೇ ಮೊದಲು ಎನ್ನಲಾಗಿದೆ.
ಚೀನಾದ ದಕ್ಷಿಣ ಪ್ರಾಂತ್ಯವಾದ ಗುವಾಂಗ್ಕ್ಸಿ ನಲ್ಲಿ ಚೀನಾ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ, ಅಕ್ರಮ ಪಿರಮಿಡ್ ವ್ಯಾಪಾರ ಮತ್ತು ವಂಚನೆ ಜಾಲದಲ್ಲಿ ತೊಡಗಿಸಿಕೊಂಡಿದ್ದ ಆರೋಪದಲ್ಲಿ 52 ಮಂದಿಯನ್ನು ಬಂಧಿಸಲಾಗಿದೆ.
ಈ ಬಂಧನದ ಕುರಿತು ಸಿಂಗಾಪುರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಸಿಂಗಾಪುರ ಪೊಲೀಸ್ ಪಡೆ ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ.
ಚೀನಾ ಅಧಿಕಾರಿಗಳೊಂದಿಗೆ ಸಿಂಗಾಪುರ ಪೊಲೀಸ್ ಪಡೆ ಸಂಪರ್ಕದಲ್ಲಿದ್ದಾರೆ, ಬೀಜಿಂಗ್ನಲ್ಲಿರುವ ಸಿಂಗಾಪುರ ರಾಯಭಾರ ಕಚೇರಿಯ ಅಧಿಕಾರಿಗಳು ಈಗಾಗಲೇ ಮೂರು ಬಾರಿ ಬಂಧಿತರನ್ನು ಭೇಟಿ ಮಾಡಿ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ.
ಸಿಂಗಾಪುರ ಸರ್ಕಾರವು ತಾನು ಬೇರೆ ದೇಶಗಳ ಆಂತರಿಕ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ಚೀನಾ ಕಾನೂನಿನ ಅಡಿಯಲ್ಲಿ ಸಿಂಗಾಪುರ ನಾಗರಿಕರಿಗೆ ಸೂಕ್ತ ನ್ಯಾಯಯುತ ಪ್ರಕ್ರಿಯೆ ಸಿಗಬೇಕು ಎಂದು ತಿಳಿಸಿದೆ.
ಹಣ ಹೂಡಿಕೆ ಮಾಡುವಾಗ ಅಥವಾ ಹೆಚ್ಚಿನ ಲಾಭದ ಆಸೆ ತೋರಿಸಿ ಜನರನ್ನು ಸೇರಿಸುವಂತಹ ಯಾವುದೇ ಯೋಜನೆಗಳಲ್ಲಿ ಭಾಗವಹಿಸುವಾಗ ನಾಗರಿಕರು ಎಚ್ಚರಿಕೆಯಿಂದ ಇರಬೇಕೆಂದು ಸಿಂಗಾಪುರ ಸರ್ಕಾರ ಮನವಿ ಮಾಡಿದೆ.
