ಮೈಸೂರು: ಮೈಸೂರಿನ ಹೆಚ್ ಬಿ ವಾಸು ಅವರು 2026-27 ನೇ ಸಾಲಿನ ರಾಜ್ಯ ಉತ್ತಮ ಉಪನ್ಯಾಸಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಅವರು ಸೆ. 5 ರ ಶಿಕ್ಷಕರ ದಿನಾಚರಣೆಯಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹಾರನಹಳ್ಳಿ ಗ್ರಾಮದವರಾದ ಹೆಚ್ ಬಿ ವಾಸು ಅವರು ಬೋರೇಗೌಡ ಮತ್ತು ನರಸಮ್ಮ ದಂಪತಿಗಳ ಪುತ್ರ.
ಪ್ರಾಥಮಿಕ,ಪ್ರೌಢ ಶಿಕ್ಷಣವನ್ನು ಹುಟ್ಟೂರಿನಲ್ಲಿ ಮುಗಿಸಿ ಪದವಿ ಶಿಕ್ಷಣವನ್ನು ಪಿರಿಯಾಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೂರ್ಣಗೊಳಿಸಿ, ಬೆಂಗಳೂರಿನ ರಾಷ್ಟ್ರೀಯ ವಿದ್ಯಾಲಯದಲ್ಲಿ ಬಿ.ಎಡ್ ಪದವಿ ಪಡೆದು, ಮೖಸೂರಿನ ಮಾನಸ ಗಂಗೋತ್ರಿಯ ಇತಿಹಾಸ ಅಧ್ಯಯನ ವಿಭಾಗದಲ್ಲಿ ಎಂಎ ಪದವಿ ಪೂರ್ಣ ಗೊಳಿಸಿ ನಂತರ ಎಂ ಫಿಲ್ ಪದವಿಯನ್ನೂ ಪಡೆದಿದ್ದಾರೆ.
2001 ರಲ್ಲಿ ಶಿಕ್ಷಕ ವೃತ್ತಿ ಆರಂಭಿಸಿ 2009 ರವರೆಗೆ ಸೋಮವಾರಪೇಟೆ
ಸಂತ ಜೋಸೇಫರ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿ ನಿರ್ವಹಿಸಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗದಿಂದ 2009ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಉಪನ್ಯಾಸಕರಾಗಿ ಆಯ್ಕೆಗೊಂಡು ಈವರೆಗೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪ್ರಸ್ತುತ ಮೈಸೂರು, ಕುವೆಂಪುನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಾಸು ಅವರು ವೃತ್ತಿಯಲ್ಲಿ ಉಪನ್ಯಾಸಕರಾದರೂ ಹಲವು ಪ್ರವೃತ್ತಿಗಳನ್ನು ಹೊಂದಿದ್ದಾರೆ.ಸಾಹಿತ್ಯ ಪ್ರೇಮಿಯಾದ ಅವರು ಉತ್ತಮ ಬರಹಗಾರರೂ, ರಂಗ ಕಲಾವಿದರು,ಉತ್ತಮ ಹಾಡುಗಾರರು, ಅತ್ಯುತ್ತಮ ಕಾರ್ಯಕ್ರಮ ನಿರೂಪಕರು ಹಾಗೂ ಉತ್ತಮ ಭಾಷಣಕಾರರು.
ಮೈಸೂರು ಜಿಲ್ಲಾ ಇತಿಹಾಸ ವೇದಿಕೆಯ ಅಧ್ಯಕ್ಷರಾಗಿ ಹಲವು ಕ್ರಿಯಾಶೀಲ ಚಟುವಟಿಕೆಗಳು ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ರಾಜ್ಯದ ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯಮಟ್ಟದ ಪ್ರಶ್ನೆ ಪತ್ರಿಕೆ ಮತ್ತು ಜಿಲ್ಲಾಮಟ್ಟದ ಪ್ರಶ್ನೆ ಪತ್ರಿಕೆ ತಯಾರಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.
ಪ್ರಥಮ ಮತ್ತು ದ್ವಿತೀಯ ಪಿಯುಸಿ ಇತಿಹಾಸ ಕೈಪಿಡಿಗಳನ್ನು ರಚಿಸಿ ಅವುಗಳನ್ನು ವೇದಿಕೆ ವತಿಯಿಂದ ಬಿಡುಗಡೆ ಮಾಡಿ ವಿದ್ಯಾರ್ಥಿಗಳಿಗೆ ಸುಲಭವಾಗಿ ಇತಿಹಾಸವನ್ನು ಅರ್ಥೈಸಿಕೊಳ್ಳಲು ಕಾರಣರಾಗಿದ್ದಾರೆ.
ಮೈಸೂರು ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಫಲಿತಾಂಶ ಸುಧಾರಣಾ ಸಮಿತಿಯ ಸದಸ್ಯರಾಗಿ ಕಾರ್ಯ, ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ವತಿಯಿಂದ ಆಯೋಜಿಸುವ ಉಪನ್ಯಾಸಕರ ಪುನಶ್ಚೇತನ ತರಬೇತಿ ಕಾರ್ಯಾಗಾರ ಗಳನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಸಂಘಟಿಸಿದ ಕೀರ್ತಿ ಗೂ ಪಾತ್ರರಾಗಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯ ಇತಿಹಾಸ ಪ್ರಶ್ನೆ ಪತ್ರಿಕೆ ತಯಾರಿಕೆಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ.
ಪ್ರಥಮ ಪಿಯುಸಿ ಪ್ರಶ್ನೆಕೋಠಿ ತಯಾರಿಕೆಯಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಅದರ ಪರಿಷ್ಕರಣಾ ಕಾರ್ಯದಲ್ಲಿ ಭಾಗವಹಿಸಿದ ಹೆಮ್ಮೆ ಇವರದು.
ವಿದ್ಯಾರ್ಥಿ ಮೆಚ್ಚಿದ ಶಿಕ್ಷಕ ಪ್ರಶಸ್ತಿ, ಪಿರಿಯಾಪಟ್ಟಣ ತಾಲೋಕಿನ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ ಮತ್ತು ಮದ್ದೂರಿನ ಗಾಂಧಿ ಶಿಕ್ಷಣ ಸಂಸ್ಥೆ ಕೊಡಮಾಡುವ ಉತ್ತಮ ಉಪನ್ಯಾಸಕ ಪ್ರಶಸ್ತಿಗೆ ಹೆಚ್.ಬಿ.ವಾಸು ಭಾಜನರಾಗಿದ್ದಾರೆ.
ಇದೀಗ 2026-27 ನೇ ಸಾಲಿನ ರಾಜ್ಯ ಉತ್ತಮ ಉಪನ್ಯಾಸಕ ಪ್ರಶಸ್ತಿಗೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ.
