ಮೈಸೂರು: ಅನ್ನಭಾಗ್ಯ ಯೋಜನೆಯಡಿ ವಿತರಿಸುವ ಆಹಾರ ಪದಾರ್ಥಗಳು ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಪ್ಪಿಸಲು ಕಠಿಣ ಕ್ರಮ ಕೈಗೊಳ್ಳಲಾಗುವುದು
ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ತಿಳಿಸಿದರು.
ಅದಕ್ಕೆ ಮೊದಲ ಹಂತವಾಗಿ ರಾಜ್ಯದ ಎಲ್ಲಾ ಗೋದಾಮುಗಳಿಗೆ ಸಿಸಿ ಕ್ಯಾಮರಾ ಮತ್ತು ಪಡಿತರ ಸಾಗಣೆ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗುವುದು ಎಂದು ಸಚಿವರು ಹೇಳಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರತಿ ಗೋದಾಮಿನಲ್ಲೂ ಕೋಟ್ಯಂತರ ರೂ. ಮೌಲ್ಯದ ಆಹಾರ ಪದಾರ್ಥಗಳಿವೆ. ಅವುಗಳ ಭದ್ರತೆಗಾಗಿ ಸಿಸಿ ಕ್ಯಾಮರಾ, ಸಾಗಣೆ ಲಾರಿಗಳಿಗೆ ಜಿಪಿಎಸ್, ಕೇಂದ್ರ ಕಚೇರಿಯಲ್ಲಿ ಕಮಾಂಡ್ ಕಂಟ್ರೋಲ್ ಸೆಂಟರ್ ಹಾಗೂ ನ್ಯಾಯಬೆಲೆ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನು ಕಡ್ಡಾಯವಾಗಿ ಅಳವಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಆದ್ಯತಾ ಪಡಿತರ ಚೀಟಿಗಳನ್ನು ಪಡೆಯುವ ಮಾನದಂಡಗಳನ್ನು ಪರಿಷ್ಕರಿಸಲು ಚಿಂತನೆ ನಡೆಸಲಾಗಿದೆ. ದುರುಪಯೋಗ ತಪ್ಪಿಸಲು ಇತ್ತೀಚೆಗೆ 4.5 ಲಕ್ಷ ಕಾರ್ಡ್ಗಳನ್ನು ರದ್ದು ಮಾಡಲಾಗಿತ್ತು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಅವರಿಗೂ ತಾತ್ಕಾಲಿಕವಾಗಿ ಪಡಿತರ ನೀಡುವಂತೆ ಆದೇಶಿಸಿದ್ದೇನೆ ಎಂದು ಸಚಿವರು ತಿಳಿಸಿದರು.
ಅನ್ನಭಾಗ್ಯ ಯೋಜನೆ ಆರಂಭಗೊಂಡು 14 ವರ್ಷಗಳಾಗಿದೆ. ರಾಜ್ಯದ 4.50 ಕೋಟಿ ಜನರಿಗೆ ಸೌಲಭ್ಯ ವಿತರಿಸುತ್ತಿರುವ ಇಲಾಖೆಯ ಜವಾಬ್ದಾರಿ ಹೊತ್ತಿದ್ದೇನೆ. ಬಡವರು ಬಿಪಿಎಲ್ ಕಾರ್ಡ್ನಿಂದ ವಂಚಿತರಾಗಬಾರದು ಮತ್ತು ಯಾರೊಬ್ಬರೂ ಹಸಿವಿನಿಂದ ಮಲಗಬಾರದು ಎಂಬುದು ನಮ್ಮ ಸರ್ಕಾರದ ಗುರಿ ಎಂದು ಹೇಳಿದರು.
ನ್ಯಾಯಬೆಲೆ ಅಂಗಡಿ ಮೂಲಕ ವಿತರಿಸುವ ಆಹಾರ ಪದಾರ್ಥಗಳು ಮತ್ತೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲಾಗುವುದು. ಕಳೆದ 3 ವರ್ಷಗಳಲ್ಲಿ 1497 ಎಫ್ಐಆರ್ ದಾಖಲಿಸಿ 86,181 ಕ್ವಿಂಟಾಲ್ ಆಹಾರ ಧಾನ್ಯ ಹಾಗೂ 49.38 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜೂನ್ 2023ರಿಂದ ಜುಲೈ 31ರವರೆಗೆ ಹೊಸದಾಗಿ 3,70,803 ಪಡಿತರ ಚೀಟಿಗಳನ್ನು ವಿತರಿಸಲಾಗಿದ್ದು, ಆದ್ಯತಾ ಪಡಿತರ ಚೀಟಿಗಾಗಿ ಬಾಕಿ ಇರುವ 1,30,546 ಅರ್ಜಿಗಳ ಪರಿಶೀಲನೆ ಪ್ರಗತಿಯಲ್ಲಿದೆ ಎಂದು ಹೇಳಿದರು.
ಇಂದಿರಾ ಕಿಟ್ ವಿತರಣೆಗಾಗಿ ಕರೆಯಲಾಗಿದ್ದ ಟೆಂಡರ್ ಅನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಮುಂದಿನ ದಿನಗಳಲ್ಲಿ ಪರಿಷ್ಕರಣೆಯೊಂದಿಗೆ ವಿತರಣೆ ಮಾಡಲಾಗುವುದು. ಈಗ ಅಕ್ಕಿ ಜೊತೆಗೆ ರಾಗಿ ಮತ್ತು ಜೋಳ ವಿತರಿಸುತ್ತಿದ್ದೇವೆ. ಜನರಿಗೆ ಅಗತ್ಯವಿರುವ ವಸ್ತುಗಳನ್ನು ನೀಡಿದರೆ ಯಾರೂ ಮಾರಾಟ ಮಾಡುವುದಿಲ್ಲ. ಟೆಂಡರ್ ಕರೆದು 8 ತಿಂಗಳಾಗಿದ್ದು, ಬೆಲೆ ಏರಿಕೆಯಾಗಿರುವುದರಿಂದ ಸಣ್ಣಪುಟ್ಟ ಮಾರ್ಪಾಡುಗಳೊಂದಿಗೆ ಇಂದಿರಾ ಕಿಟ್ ನೀಡಲಾಗುವುದು ಎಂದು ರಿಜ್ವಾನ್ ಹೇಳಿದರು.
ಇದಲ್ಲದೆ ಬಯೋಮೆಟ್ರಿಕ್ ಸಮಸ್ಯೆ ನಿವಾರಣೆಗೆ ಕ್ರಮ, ಸರ್ವರ್ ಸಮಸ್ಯೆ ನೀಗಿಸಲು ಖಾಸಗಿ ಸಂಸ್ಥೆಯ ಸಲಹೆ ಸ್ವೀಕಾರ, ನ್ಯಾಯಬೆಲೆ ಅಂಗಡಿಗಳಿಗೆ ಸಮಯ ನಿಗದಿ ಹಾಗೂ ಎಲ್ಪಿಜಿ ಸಿಲಿಂಡರ್ಗಳ ಅಕ್ರಮ ವರ್ಗಾವಣೆಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸಿರುವುದು ಲೀಗಲ್ ಟೆರರಿಸಂ ಎಂದು ಇದೇ ವೇಳೆ ರಿಜ್ವಾನ್ ಅರ್ಷದ್ ವ್ಯಾಖ್ಯಾನಿಸಿದರು.
ಉತ್ತರಾಖಂಡ್ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಾಲ್ಗೊಂಡಿದ್ದ ಸ್ಥಳವನ್ನು ಶುದ್ಧೀಕರಣ ಮಾಡಿ ಅಸ್ಪೃಶ್ಯತೆ ಆಚರಿಸಲಾಯಿತು. ಅವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಘಟನೆ ಖಂಡಿಸಿ ಪ್ರತಿಭಟನೆ ನಡೆಸಿದ ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸಿರುವುದು ಖಂಡನೀಯ ಎಂದು ರಿಜ್ವಾನ್ ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಧ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತರಾದ ಟಿ.ವಿ. ರಾಜೇಶ್ವರ್, ಪ್ರಗತಿ ಗೋಪಾಲಕೃಷ್ಣ, ಜಯಂತ್, ಎಂ. ಮಹೇಶ್ ಅವರನ್ನು ಸಚಿವರು ಅಭಿನಂದಿಸಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ, ಉಪಾಧ್ಯಕ್ಷ ರವಿ ಪಾಂಡವಪುರ, ಗ್ರಾಮಾಂತರ ಉಪಾಧ್ಯಕ್ಷ ದಾ.ರಾ. ಮಹೇಶ್ ಉಪಸ್ಥಿತರಿದ್ದರು.
