ಬೆಂಗಳೂರು: ದ್ವಿಚಕ್ರ ವಾಹನ ಸವಾರರು ತೆರಿಗೆ ಕಟ್ಟುವುದಿಲ್ಲವೇ, ಫ್ಲೈಓವರ್ಗಳಲ್ಲಿ ಬೈಕ್ಗಳಿಗೆ ನಿಷೇಧ ಏಕೆ ಎಂದು ಸರ್ಕಾರದ ವಿರುದ್ಧ ಎಎಪಿ ಆಕ್ರೋಶ ವ್ಯಕ್ತಪಡಿಸಿದೆ.
ದ್ವಿಚಕ್ರ ವಾಹನಗಳನ್ನು ಫ್ಲೈಓವರ್ಗಳಲ್ಲಿ ಸಂಚರಿಸಲು ನಿರ್ಬಂಧಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಬೆಂಗಳೂರು ಪಕ್ಷದ ಸಂಘಟನಾ ಕಾರ್ಯದರ್ಶಿ ಅಶೋಕ್ ಮೃತ್ಯುಂಜಯ ತಿಳಿಸಿದ್ದಾರೆ
ದ್ವಿಚಕ್ರ ವಾಹನ ಸವಾರರು ತೆರಿಗೆ ಕಟ್ಟುವುದಿಲ್ಲವೇ, ಕಾರುಗಳನ್ನು ಬಳಸುವವರು ಮಾತ್ರ ತೆರಿಗೆ ಪಾವತಿಸುತ್ತಾರೆಯೇ ಎಂದು ಸರ್ಕಾರಕ್ಕೆ ನೇರ ಪ್ರಶ್ನೆ ಹಾಕಿದ್ದಾರೆ.
ಫ್ಲೈಓವರ್ಗಳು ಯಾರೊಬ್ಬರ ಖಾಸಗಿ ಆಸ್ತಿಯಲ್ಲ. ಪ್ರತಿಯೊಬ್ಬ ನಾಗರಿಕನೂ ಪಾವತಿಸುವ ತೆರಿಗೆ ಹಣದಿಂದ ನಿರ್ಮಾಣವಾಗಿರುವ ಸಾರ್ವಜನಿಕ ಮೂಲಸೌಕರ್ಯ. ಹಾಗಿರುವಾಗ ದ್ವಿಚಕ್ರ ವಾಹನ ಸವಾರರಿಗೆ ಮಾತ್ರ ಅವುಗಳ ಬಳಕೆಯನ್ನು ನಿರ್ಬಂಧಿಸುವುದಕ್ಕೆ ಸರ್ಕಾರ ಯಾವ ನ್ಯಾಯವನ್ನು ಮುಂದಿಡುತ್ತದೆ ಎಂದು ಅಶೋಕ್ ಮೃತ್ಯುಂಜಯ ಪ್ರಶ್ನಿಸಿದ್ದಾರೆ.
ದ್ವಿಚಕ್ರ ವಾಹನಗಳಿಂದ ನೀವು ಕಡಿಮೆ ತೆರಿಗೆ ಸಂಗ್ರಹಿಸಿಲ್ಲ. ರಸ್ತೆ ತೆರಿಗೆ, ಇಂಧನದ ಮೇಲಿನ ತೆರಿಗೆ ಸೇರಿದಂತೆ ಹಲವು ರೂಪಗಳಲ್ಲಿ ದ್ವಿಚಕ್ರ ವಾಹನ ಸವಾರರೂ ಸರ್ಕಾರದ ಬೊಕ್ಕಸಕ್ಕೆ ತಮ್ಮ ಕೊಡುಗೆ ನೀಡುತ್ತಿದ್ದಾರೆ. ಹಾಗಿದ್ದರೂ ಅವರಿಗೆ ಮಾತ್ರ ಸಾರ್ವಜನಿಕ ರಸ್ತೆಗಳ ಬಳಕೆಯಲ್ಲಿ ತಾರತಮ್ಯ ಮಾಡುವುದು ಯಾವ ನ್ಯಾಯ ಎಂದು ಅವರು ಕಿಡಿ ಕಾರಿದ್ದಾರೆ.
ಸಂಚಾರ ದಟ್ಟಣೆ ಮತ್ತು ಅಪಘಾತಗಳನ್ನು ನಿಯಂತ್ರಿಸುವುದು ಸರ್ಕಾರ ಹಾಗೂ ಸಂಚಾರ ಪೊಲೀಸರ ಜವಾಬ್ದಾರಿ. ಅದನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗದಿದ್ದರೆ, ಅದರ ಹೊಣೆಯನ್ನು ಸಾಮಾನ್ಯ ಜನರ ಮೇಲೆ ಹೊರಿಸುವುದು ಆಡಳಿತದ ಅಸಮರ್ಥತೆಯನ್ನು ಮುಚ್ಚಿಹಾಕುವ ಪ್ರಯತ್ನ ಎಂದು ಅವರು ಟೀಕಿಸಿದ್ದಾರೆ.
ಅಪಘಾತಗಳನ್ನು ತಡೆಯುವ ಹೆಸರಿನಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಅನಗತ್ಯ ಸುತ್ತುಬಳಸಿ ಪ್ರಯಾಣಿಸುವಂತೆ ಮಾಡುವುದು, ಸಮಯ ಮತ್ತು ಇಂಧನ ವ್ಯರ್ಥವಾಗುವಂತೆ ಮಾಡುವುದು ಜನವಿರೋಧಿ ಕ್ರಮವಾಗಿದೆ.
ಸುರಕ್ಷತೆ ಹೆಸರಿನಲ್ಲಿ ನಿರ್ಬಂಧ ಹೇರುವ ಬದಲು, ವೈಜ್ಞಾನಿಕ ಸಂಚಾರ ನಿರ್ವಹಣೆ, ಸೂಕ್ತ ವೇಗ ನಿಯಂತ್ರಣ, ಸ್ಪಷ್ಟ ಲೇನ್ ವ್ಯವಸ್ಥೆ, ಪರಿಣಾಮಕಾರಿ ಮೇಲ್ವಿಚಾರಣೆ ಹಾಗೂ ಸಂಚಾರ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಸರ್ಕಾರ ಮುಂದಾಗಬೇಕು ಎಂದು ಅಶೋಕ್ ಮೃತ್ಯುಂಜಯ ಆಗ್ರಹಿಸಿದ್ದಾರೆ.
