ಮೈಸೂರು, ಸೆ.2: ಆಹಾರ, ನಾಗರಿಕ ಸರಬರಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಬಡ ಜನರಿಗೆ ಆಹಾರ ಒದಗಿಸಿ ಸೇವೆ ಸಲ್ಲಿಸುವ ಇಲಾಖೆಯಾಗಿದೆ ಎಂದು
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ರಿಜ್ವಾನ್ ಅರ್ಷದ್ ಅವರು ತಿಳಿಸಿದರು.
ಅಧಿಕಾರಿಗಳು ಉತ್ತಮ ಸೇವೆ ಸಲ್ಲಿಸಿ ಇಲಾಖೆಯ ಹೆಸರು ಸಮಾಜದಲ್ಲಿ ಉಳಿಯುವಂತೆ ಮಾಡಿ ಎಂದು ಸಚಿವರು ಸಲಹೆ ನೀಡಿದರು.
ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮೈಸೂರು ವಿಭಾಗ ಮಟ್ಟದ ಆಹಾರ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದ ಅವರು, ಕಾನೂನು ಮಾಪನ ಇಲಾಖೆಯ ಕೆಲಸ ನಿರ್ವಹಣೆಯ ಬಗ್ಗೆ ಸಾರ್ವಜನಿಕರಿಗೆ ತಿಳಿಯುತ್ತಿಲ್ಲ. ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾಪನಗಳಲ್ಲಿ ಗ್ರಾಹಕರಿಗೆ ಮೋಸವಾಗುತ್ತಿರುವ ಕಡೆ ಹೆಚ್ಚು ದಾಳಿ ನಡೆಸಿ ಎಂದು ಸೂಚಿಸಿದರು.
ಸಕ್ಕರೆ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿದ್ದು, ಅಕ್ರಮವಾಗಿ ದಾಸ್ತಾನು ಮಾಡಿಕೊಂಡಿದ್ದಲ್ಲಿ ಪರಿಶೀಲನೆ ನಡೆಸಬೇಕು. ಎಲ್.ಪಿ.ಜಿ ಸಿಲೆಂಡರ್ ಗಳು ನಿಗದಿತ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಂಗ್ರಹಣೆಯಾಗಿದ್ದಲ್ಲಿ ಕಾನೂನು ರೀತಿ ಕ್ರಮ ತೆಗೆದುಕೊಳ್ಳಿ ಎಂದು ಆದೇಶಿಸಿದರು.
ಮೈಸೂರು ವಿಭಾಗದ 8 ಜಿಲ್ಲೆಗಳಲ್ಲಿ 88424 ಜನರು ಇ.ಕೆವೈಸಿ ಮಾಡಿಸಿರುವುದಿಲ್ಲ. ಇದರ ಬಗ್ಗೆ ಅಧಿಕಾರಿಗಳು ಹೆಚ್ಚು ನಿಗಾ ವಹಿಸಿ ಪೂರ್ಣಗೊಳಿಸಬೇಕು. ವಲಸೆ ಹೋಗಿರುವುದು, ಮರಣ,ವಿವಹವಾಗಿ ಬೇರೆ ಸ್ಥಳಕ್ಕೆ ಸ್ಥಳಾಂತರ ಸೇರಿದಂತೆ ಇನ್ನಿತರೆ ಕಾರಣದಿಂದ ಇಕೆವೈಸಿ ಆಗಿರುವುದಿಲ್ಲ. ಪರಿಶೀಲನೆ ನಡೆಸಿ ಷರಾದಲ್ಲಿ ನಮೂದಿಸಿ ಕೇಂದ್ರ ಕಚೇರಿಗೆ ಕಳುಹಿಸಿಕೊಡಿ ನಂತರ ಪಡಿತರ ಚೀಟಿ ರದ್ದು ಪಡಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದು ರಿಜ್ವಾನ್ ತಿಳಿಸಿದರು.
ಪಡಿತರ ಆಹಾರ ಧಾನ್ಯ ಸಾಗಾಣಿಕೆ ವಾಹನಗಳಿಗೆ ಸಂಬಂಧಿಸಿದಂತೆ ಮೈಸೂರು ವಿಭಾಗದ 8 ಜಿಲ್ಲೆಗಳಲ್ಲಿ 371 ವಾಹನಗಳಿದ್ದು ಅದರಲ್ಲಿ 176 ವಾಹನಗಳಿಗೆ ಮಾತ್ರ ಜಿ.ಪಿ.ಎಸ್ ಅಳವಡಿಸಲಾಗಿದೆ.195 ವಾಹನಗಳಿಗೆ ಜಿ.ಪಿಎಸ್ ಅಳವಡಿಸಬೇಕಿದ್ದು,15 ದಿನದೊಳಗಾಗಿ ಜಿ.ಪಿ.ಎಸ್ ಅಳವಡಿಸಿ ವರದಿ ನೀಡುವಂತೆ ತಿಳಿಸಿದರು.
ಅಕ್ರಮ ಆಹಾರ ದಾಸ್ತಾನು ಮಾಡಿರುವ ಸ್ಥಳಗಳ ಮೇಲೆ ಹೆಚ್ಚು ದಾಳಿಗಳನ್ನು ನಡೆಸಬೇಕು. ಇಲಾಖೆ ಕಾರ್ಯನಿರ್ವಹಣೆ ಕುರಿತಂತೆ ನಿಗದಿತವಾಗಿ ವರದಿಯನ್ನು ಕಳುಹಿಸಿಕೊಡಬೇಕು, ವರದಿಯನ್ನು ಪ್ರತಿ ವಾರ ಪರಿಶೀಲಿಸಲಾಗುವುದು ಎಂದರು.
ಕಾನೂನು ಮಾಪನ ಶಾಸ್ತ್ರ ಇಲಾಖೆಯ ಉಪ ನಿಯಂತ್ರಕರಾದ ಸರಳಾ ನಾಯ್ಡು ಅವರು ಹಾಗೂ ಆಹಾರ ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ ಅವರು ಇಲಾಖೆಯ ಕಾರ್ಯನಿರ್ವಹಣೆಯ ಬಗ್ಗೆ ವಿವರ ನೀಡಿದರು.
ಸಭೆಯಲ್ಲಿ ಆಹಾರ ಇಲಾಖೆ ಕಾರ್ಯದರ್ಶಿ ಕನಗವಲ್ಲಿ, ಆಯುಕ್ತೆ ಪೂರ್ಣಿಮಾ, ನಿರ್ದೇಶಕ ರಾಜಶೇಖರ್, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಪ್ರಧಾನ ವ್ಯವಸ್ಥಾಪಕ ಮಂಜುನಾಥ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
