ಮೈಸೂರು, ಸೆ.2: ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು, ಜಲಾಶಯಗಳ ನೀರನ್ನು ಅತ್ಯಂತ ಎಚ್ಚರಿಕೆಯಿಂದ ಬಳಸಬೇಕು ಎಂದು ಡಿಸಿಎಂ ಡಾ.ಜಿ.ಪರಮೇಶ್ವರ ಕಡಕ್ ಸೂಚನೆ ನೀಡಿದರು.
ಯಾವುದೇ ಗ್ರಾಮ ಅಥವಾ ನಗರ ಪ್ರದೇಶದಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮೈಸೂರು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಬರಗಾಲದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.
ನೀರಿನ ಕೊರತೆ ಸಂದರ್ಭದಲ್ಲಿ ಜನರು ನೀರನ್ನು ಶೇಖರಿಸಿಟ್ಟುಕೊಳ್ಳುತ್ತಾರೆ. ಇದರಿಂದ ಡೆಂಗ್ಯೂ, ಚಿಕೂನ್ ಗುನ್ಯಾ ರೀತಿಯ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಜನರಿಗೆ ಸೂಕ್ತ ತಿಳುವಳಿಕೆ ಮೂಡಿಸಬೇಕು. ನಿಯಮಿತವಾಗಿ ಟಾಸ್ಕ್ ಫೋರ್ಸ್ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಗಳನ್ನು ನಡೆಸಬೇಕು ಎಂದು ಸೂಚಿಸಿದರು.
ಎಲ್ ನಿನೊ ಇರುವ ವರ್ಷಗಳಲ್ಲಿ ಬಿಟ್ಟುಬಿಟ್ಟು ಮಳೆ ಬರುವುದರಿಂದ ಹಠಾತ್ ಪ್ರವಾಹ, ಸಿಡಿಲು ಬಡಿತದ ಸಾಧ್ಯತೆ ಹೆಚ್ಚಿರುತ್ತದೆ. ಹವಾಮಾನ ಸೂಚನೆ ಆಧರಿಸಿ ಕ್ರಮವಹಿಸಬೇಕು,ಬಿತ್ತನೆ ಬೀಜ, ಮೇವಿಗೆ ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ಸೂಚಿಸಿದರು.
ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳು ತಂಡದ ಮೂಲಕ ಪರಿಶೀಲನೆ ನಡೆಸಬೇಕು. ಕೊಳವೆ ಬಾವಿ ಸೇರಿದಂತೆ ನೀರಿನ ಮೂಲ ಹೊಂದಿರುವವರು ಮೇವು ಬೆಳೆಯುವಂತೆ ಪ್ರೋತ್ಸಾಹಿಸಬೇಕು. ಮೇವಿನ ಬೀಜಗಳ ಕಿಟ್ ವಿತರಿಸಲು ಕ್ರಮ ಕೈಗೊಳ್ಳಬೇಕು. ಜಾನುವಾರುಗಳಿಗೆ ಅಗತ್ಯವಿರುವ ಲಸಿಕೆಗಳನ್ನು ಕಾಲಕಾಲಕ್ಕೆ ನೀಡಲಾಗಿದೆಯೇ ಎಂದು ಪರಿಶೀಲಿಸಬೇಕು ಎಂದು ಹೇಳಿದರು.
ಯಾವುದೇ ಜನವಸತಿ ಪ್ರದೇಶಕ್ಕೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು, ಕುಡಿಯುವ ನೀರಿಗೆ ಮೊದಲು ಜಲಾಶಯದ ನೀರನ್ನು ಬಳಸಿ. ಕೊಳವೆ ಬಾವಿಗಳು ಖಾಲಿಯಾದರೆ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆಯಿರಿ. ನಂತರವೂ ಸಮಸ್ಯೆ ಇದ್ದರೆ ಕೊಳವೆ ಬಾವಿಗಳನ್ನು ಡೀಪನಿಂಗ್ ಮಾಡಿ. ಕೊನೆಯ ಆದ್ಯತೆಯಾಗಿ ಹೊಸ ಕೊಳವೆ ಬಾವಿ ಕೊರೆಯಬೇಕು. ತುರ್ತು ಅಗತ್ಯವಿದ್ದರೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು ಎಂದು ಡಿಸಿಎಂ ಸಲಹೆ ನೀಡಿದರು.
ರಾಜ್ಯದ ಪ್ರತಿ ತಾಲ್ಲೂಕಿಗೂ ಹಿರಿಯ ಕೆಎಎಸ್ ಅಧಿಕಾರಿಗಳನ್ನು ಉಸ್ತುವಾರಿ ಅಧಿಕಾರಿಗಳಾಗಿ ನೇಮಿಸಲಾಗಿದೆ. ಅವರನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದರು.
ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಕುಡಿಯುವ ನೀರು, ಮೇವು, ಲಸಿಕೆ, ರೈತರಿಗೆ ಬಿತ್ತನೆ ಬೀಜ, ಗೊಬ್ಬರ ದಾಸ್ತಾನು, ಕುಡಿಯುವ ನೀರಿನ ಸಮಸ್ಯೆ ಬಾರದಂತೆ ನೋಡಿಕೊಳ್ಳಬೇಕು. ಗುಳೆ ಹೋಗುವವರಿಗೆ ನರೇಗಾ ಯೋಜನೆಯಡಿ ಲಭ್ಯ ಅನುದಾನ ಬಳಸಿಕೊಂಡು ಉದ್ಯೋಗ ನೀಡಲು ಕ್ರಮವಹಿಸಬೇಕು ಎಂದು ಜಿ ಪರಮೇಶ್ವರ ಅವರು ಅಧಿಕಾರಿಗಳಿಗೆ ಆದೇಶಿಸಿದರು.
