ಬೆಂಗಳೂರು: ಮೂರು ವರ್ಷಗಳಲ್ಲಿ ಸಿಗಬೇಕಿದ್ದ ಗೃಹಲಕ್ಷ್ಮಿ ಯೋಜನೆಯ 36 ಕಂತುಗಳಲ್ಲಿ 3 ಕಂತು ಮಂಗಮಾಯವಾಗಿದೆ ಸಿಎಂ ಡಿ.ಕೆ.ಶಿವಕುಮಾರ್ ಅವರೇ, ರಾಜ್ಯದ ತಾಯಂದಿರ ಉಳಿದ ಹಣ ಎಲ್ಲಿ ಹೋಯ್ತು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
3 ವರ್ಷ ಪೂರ್ಣಗೊಳ್ಳುತ್ತಿದ್ದರೂ ‘ಗೃಹಲಕ್ಷ್ಮಿ’ ಯೋಜನೆಯಡಿ ಬಿಡುಗಡೆಯಾಗು ತ್ತಿರುವುದು ಬರೀ 33ನೇ ಕಂತು ಎಂದು ಟ್ವೀಟ್ ಮಾಡಿ ಅಶೋಕ್ ಟೀಕಿಸಿದ್ದಾರೆ.
ಬಣ್ಣ ಬಣ್ಣದ ಜಾಹೀರಾತು ನೀಡಿ ಮೆರೆಯುವ ಮುಖ್ಯಮಂತ್ರಿ ಗಳೇ, 36 ತಿಂಗಳಲ್ಲಿ 36 ಕಂತಿನ ಹಣ ತಾಯಂದಿರ ಖಾತೆಗೆ ತಲುಪಬೇಕಿತ್ತು. ಆದರೆ 33ನೇ ಕಂತು ಬಿಡುಗಡೆ ಮಾಡಿ ದೊಡ್ಡ ಸಾದನೆ ಮಾಡಿದಂತೆ ಮಾಧ್ಯಮಗಳ ಮುಂದೆ ಬಡಾಯಿ ಕೊಚ್ಚುತ್ತಿದ್ದೀರಿ, ಆ ಬಾಕಿ ಉಳಿಸಿಕೊಂಡ 3 ಕಂತುಗಳ ಹಣವನ್ನು ಎಲ್ಲಿ ಗುಳುಂ ಮಾಡಿದ್ದೀರಿ ಎಂದು ಅಶೋಕ್ ಖಾರವಾಗಿ ಪ್ರಶ್ನಿಸಿದ್ದಾರೆ.
ಪ್ರತಿಯೊಬ್ಬ ಮಹಿಳೆಗೆ ಸಿಗಬೇಕಿದ್ದ 6,000 ಹಣವನ್ನು ಸರ್ಕಾರ ನುಂಗಿ ನೀರು ಕುಡಿದಿದೆ,
33ನೇ ಕಂತಿನ ಹಣ ಬಿಡುಗಡೆ ಜೊತೆಗೇ ಮತ್ತೆ ‘ಮರು ಪರಿಶೀಲನೆ’ ನಡೆಸಲು ಸೂಚನೆ ನೀಡಿದ್ದಾರೆ. ಇದು ತಾಯಂದಿರಿಗೆ ನೀಡುವ ಸೌಲಭ್ಯವನ್ನು ಮತ್ತಷ್ಟು ಕಡಿತಗೊಳಿಸಲು ಹೆಣೆದಿರುವ ಕುತಂತ್ರ, ಉಚಿತ ಎಂದು ಹೇಳಿ ಈಗ ಸೈಲೆಂಟ್ ಆಗಿ ಕಂತುಗಳನ್ನು ಕಡಿತಗೊಳಿಸುತ್ತಾ ರಾಜ್ಯದ ಜನರಿಗೆ ಚೊಂಬು ತೋರಿಸುತ್ತಿರುವುದು ನಿಮ್ಮ ಆಡಳಿತ ವೈಖರಿ,
ಜಾಹೀರಾತಿಗೆ ಕೋಟಿ ಕೋಟಿ ಸುರಿಯುವ ನಿಮಗೆ ಬಡವರ ಖಾತೆಗೆ ಹಣ ಹಾಕಲು ಖಜಾನೆಯಲ್ಲಿ ಹಣವಿಲ್ಲವೇ ಎಂದು ಅಶೋಕ್ ಕೇಳಿದ್ದಾರೆ.
ಕರ್ನಾಟಕದ ಸ್ವಾಭಿಮಾನಿ ಮಹಿಳೆಯರ ಕಣ್ಣಿಗೆ ಮಣ್ಣೆರಚುವುದನ್ನು ನಿಲ್ಲಿಸಿ,ಬಾಕಿ ಇರುವ 3 ಕಂತುಗಳ ಹಣವನ್ನು ತಕ್ಷಣ ಪ್ರತಿಯೊಬ್ಬ ಮಹಿಳೆಯ ಖಾತೆಗೆ ಜಮೆ ಮಾಡಿ. ಇಲ್ಲವಾದರೆ ರಾಜ್ಯದ ಕೋಟ್ಯಂತರ ತಾಯಂದಿರ ಆಕ್ರೋಶಕ್ಕೆ ಕಾಂಗ್ರೆಸ್ ಸರ್ಕಾರ ಕೊಚ್ಚಿ ಹೋಗುವುದು ಖಚಿತ, ನಿಶ್ಚಿತ ಎಂದು ಅಶೋಕ್ ಎಚ್ಚರಿಸಿದ್ದಾರೆ.
