ಬೆಂಗಳೂರು: ಮೂರು ದಶಕಗಳಿಂದ ಕರ್ನಾಟಕದ ಜನರು ಹಾಗೂ ಕರಾವಳಿ ಭಾಗದ ಜನಪ್ರತಿನಿಧಿಗಳು ಒತ್ತಾಯಿಸುತ್ತಿದ್ದ ಮಂಗಳೂರು ರೈಲ್ವೆ ವಿಭಾಗ ಇದೀಗ ಕರ್ನಾಟಕದ ಪಾಲಾಗಿರುವುದು ಸ್ವಾಗತಾರ್ಹ ಹಾಗೂ ಐತಿಹಾಸಿಕ ನ್ಯಾಯ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
ಮಂಗಳೂರು ರೈಲ್ವೆ ವಿಭಾಗ ಕರ್ನಾಟಕಕ್ಕೆ ಸೇರ್ಪಡೆಯಾಗಿರುವುದರಿಂದ ಕೇರಳಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ಕೇರಳದ ಕಾಂಗ್ರೆಸ್ ಸಂಸದರು ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದು ನಾಚಿಕೆಗೇಡಿನ
ಎಂದು ಅವರು ಟೀಕಿಸಿದ್ದಾರೆ.
ಕರ್ನಾಟಕಕ್ಕೆ ನ್ಯಾಯಯುತವಾಗಿ ದೊರೆಯಬೇಕಾದ ಹಕ್ಕು ಮತ್ತು ಆದಾಯದ ವಿಚಾರದಲ್ಲಿ ಕೇರಳದ ಪರ ನಿಂತು ಹೋರಾಟ ನಡೆಸುತ್ತಿರುವ ಕಾಂಗ್ರೆಸ್ ಸಂಸದರ ನಡೆ ಕನ್ನಡಿಗರಿಗೆ ಮಾಡುತ್ತಿರುವ ಅನ್ಯಾಯ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಇಷ್ಟು ವರ್ಷಗಳ ಕಾಲ ಕರ್ನಾಟಕದ ಪಾಲಿಗೆ ಬರಬೇಕಿದ್ದ ಆದಾಯ ಮತ್ತು ಅಭಿವೃದ್ಧಿಯ ಅವಕಾಶಗಳು ಬೇರೆ ರಾಜ್ಯದ ವ್ಯಾಪ್ತಿಯಲ್ಲಿದ್ದಾಗ ಕಾಂಗ್ರೆಸ್ ಸಂಸದರಿಗೆ ಕರ್ನಾಟಕದ ನ್ಯಾಯ ನೆನಪಾಗಲಿಲ್ಲ. ಈಗ ಮಂಗಳೂರು ರೈಲ್ವೆ ವಿಭಾಗ ಕರ್ನಾಟಕದ ಪಾಲಾಗುತ್ತಿದ್ದಂತೆ ಕೇರಳಕ್ಕೆ ಅನ್ಯಾಯವಾಗಿದೆ ಎಂದು ಉಪವಾಸ ಕೂರುವುದು ಯಾವ ರೀತಿಯ ನ್ಯಾಯ ಎಂದು ಮುಖ್ಯಮಂತ್ರಿ ಚಂದ್ರು ಪ್ರಶ್ನಿಸಿದ್ದಾರೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ನಿಲುವನ್ನು ಬಹಿರಂಗಪಡಿಸಬೇಕು. ಕೇರಳದ ಕಾಂಗ್ರೆಸ್ ಸಂಸದರ ಉಪವಾಸ ಸತ್ಯಾಗ್ರಹವನ್ನು ಅವರು ಬೆಂಬಲಿಸುತ್ತಾರೆಯೇ? ಅಥವಾ ಕರ್ನಾಟಕಕ್ಕೆ ನ್ಯಾಯಯುತವಾಗಿ ದೊರೆತಿರುವ ಮಂಗಳೂರು ರೈಲ್ವೆ ವಿಭಾಗದ ಪರ ನಿಲ್ಲುತ್ತಾರೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಚಂದ್ರು ಆಗ್ರಹಿಸಿದ್ದಾರೆ.
ತಮಿಳುನಾಡು ಸೇರಿದಂತೆ ನೆರೆಯ ರಾಜ್ಯಗಳ ಕೆಲವು ನಾಯಕರು ಕರ್ನಾಟಕದ ವಿಚಾರಗಳಲ್ಲಿ ಸಂಕುಚಿತ ರಾಜಕಾರಣ ಮಾಡುತ್ತಿರುವಾಗಲೂ ರಾಹುಲ್ ಗಾಂಧಿ ಮೌನ ವಹಿಸಿದ್ದಾರೆ. ದಕ್ಷಿಣ ರಾಜ್ಯಗಳು ಕೇಂದ್ರದ ಅನ್ಯಾಯದ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕಾದ ಸಂದರ್ಭದಲ್ಲಿ, ಕಾಂಗ್ರೆಸ್ ಪಕ್ಷವೇ ರಾಜ್ಯಗಳ ನಡುವೆ ಹಕ್ಕು ಮತ್ತು ಆದಾಯಕ್ಕಾಗಿ ಸಂಘರ್ಷ ಸೃಷ್ಟಿಸುತ್ತಿರುವುದು ದುರದೃಷ್ಟಕರ ಎಂದಿದ್ದಾರೆ.
ಈ ವಿಚಾರದಲ್ಲಿ ರಾಜ್ಯದ ಬಿಜೆಪಿ ಹಾಗೂ ಕಾಂಗ್ರೆಸ್ ಸಂಸದರು ಇದುವರೆಗೂ ಮೌನ ವಹಿಸಿರುವುದು ಅವರ ನಿರ್ಲಜ್ಜ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ರಾಜ್ಯದ ಸಂಸದರು ಕೂಡಲೇ ಎದ್ದುನಿಂತು ನಮಗೆ ದೊರಕಿರುವ ನ್ಯಾಯ ಬದ್ಧ ಅವಕಾಶವನ್ನು ಉಳಿಸಿಕೊಳ್ಳಲು ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ನಿಜವಾಗಿಯೂ ದಕ್ಷಿಣ ಭಾರತದ ರಾಜ್ಯಗಳ ಹಿತಾಸಕ್ತಿ ಮುಖ್ಯವಾಗಿದ್ದರೆ, ರಾಜ್ಯಗಳ ನಡುವೆ ನ್ಯಾಯಯುತ ಹಂಚಿಕೆ ಮತ್ತು ಪರಸ್ಪರ ಗೌರವದ ನಿಲುವು ತಾಳಬೇಕು. ಕೇರಳದ ರಾಜಕೀಯ ಒತ್ತಡಕ್ಕೆ ಮಣಿದು ಕರ್ನಾಟಕದ ಹಕ್ಕನ್ನು ಪ್ರಶ್ನಿಸುವ ದ್ವಂದ್ವ ನೀತಿಯನ್ನು ರಾಹುಲ್ ಗಾಂಧಿ ಕೈಬಿಡಬೇಕು. ಕರ್ನಾಟಕದ ನ್ಯಾಯಯುತ ಹಕ್ಕಿನ ಪರ ಅವರು ತಮ್ಮ ನಿಲುವನ್ನು ಸ್ಪಷ್ಟವಾಗಿ ಘೋಷಿಸಬೇಕು ಎಂದು ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದ್ದಾರೆ.
