ಮೈಸೂರು: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಅಗ್ನಿವೀರ್ ನಂದನ್(24) ಕುಟುಂಬದವರಿಗೆ ಹುಣಸೂರು ಕ್ಷೇತ್ರದ ಶಾಸಕ ಜಿ.ಡಿ. ಹರೀಶ್ ಗೌಡ ಅವರು ಸಾಂತ್ವಾನ ಹೇಳಿದರು.
ಹುಣಸೂರು ತಾಲೂಕು ಹಿರಿಕ್ಯಾತನಹಳ್ಳಿ ಗ್ರಾಮದ ಅಗ್ನಿವೀರ್ ನಂದನ್(24) ಮೃತಪಟ್ಟ ಹಿನ್ನೆಲೆಯಲ್ಲಿ ಜಿ.ಡಿ. ಹರೀಶ್ ಗೌಡರು, ಆಸ್ಪತ್ರೆಗೆ ಭೇಟಿ ನೀಡಿ ಮೃತನ ಕುಟುಂಬದವರನ್ನು ಸಂತೈಸಿ, ವೈಯಕ್ತಿಕವಾಗಿ 2 ಲಕ್ಷ ರೂ ಆರ್ಥಿಕ ನೆರವು ನೀಡಿದರು.
ದೇಶದ ರಕ್ಷಣಾ ಕಾರ್ಯದಲ್ಲಿ ಅಗ್ನಿವೀರ್ ಆಗಿ ಸೇವೆ ಸಲ್ಲಿಸುತ್ತಿದ್ದ ನಂದನ್, 15 ದಿನಗಳ ಹಿಂದೆ ಹಿನಕಲ್ ಬಳಿ ಸಂಭವಿಸಿದ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದರು. ಈತನನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಜಿ.ಡಿ. ಹರೀಶ್ ಗೌಡ ಅವರು, ಮೃತರ ಕುಟುಂಬ ಸದಸ್ಯರನ್ನು ಭೇಟಿಯಾಗಿ, ಸಾಂತ್ವಾನ ಹೇಳಿದರು.
ದೇಶದ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ನಂದನ್ ಅವರ ಅಕಾಲಿಕ ನಿಧನ ಅವರ ಕುಟುಂಬಕ್ಕೆ ಮಾತ್ರವಲ್ಲದೆ ಸಮಾಜ ಹಾಗೂ ದೇಶಕ್ಕೂ ತುಂಬಲಾರದ ನಷ್ಟವಾಗಿದೆ. ದೇಶ ಸೇವೆ ಸಲ್ಲಿಸುತ್ತಿದ್ದ ಯುವಕನನ್ನು ಕಳೆದುಕೊಂಡಿದ್ದು ಪ್ರತಿಯೊಬ್ಬರಿಗೂ ದುಃಖ ತಂದಿದೆ. ಮೃತ ನಂದನ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬದವರಿಗೆ ಈ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.
ಅಲ್ಲದೇ ಇಂತಹ ದುರ್ಘಟನೆಗಳು ರಸ್ತೆ ಸುರಕ್ಷತೆಯ ಮಹತ್ವವನ್ನು ನೆನಪಿಸುತ್ತದೆ. ವಾಹನ ಸವಾರರು ವೇಗಕ್ಕಿಂತ ಸುರಕ್ಷತೆಗೆ ಆದ್ಯತೆ ನೀಡಿ, ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹೆಲ್ಮೆಟ್ ಹಾಗೂ ಸೀಟ್ಬೆಲ್ಟ್ಗಳನ್ನು ಕಡ್ಡಾಯವಾಗಿ ಬಳಸುವುದರ ಜೊತೆಗೆ ಅತಿವೇಗ ಮತ್ತು ಅಜಾಗರೂಕ ಚಾಲನೆಯನ್ನು ತಪ್ಪಿಸಬೇಕು. ಒಂದು ಕ್ಷಣದ ಎಚ್ಚರಿಕೆ ಒಂದು ಕುಟುಂಬದ ಬದುಕನ್ನು ಉಳಿಸಬಲ್ಲದು ಎಂದು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಮನವಿ ಮಾಡಿದರು.
