ಬೆಂಗಳೂರು: ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಸಮಗ್ರ ಚರ್ಚೆ ನಡೆಸಬೇಕಿದ್ದ ವಿಧಾನಮಂಡಲ ಅಧಿವೇಶನವನ್ನು ಮೊಟಕುಗೊಳಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ತೀವ್ರವಾಗಿ ಖಂಡಿಸಿದ್ದಾರೆ.
ಸರ್ಕಾರದ ವೈಫಲ್ಯಗಳನ್ನು ಪರಿಣಾಮಕಾರಿಯಾಗಿ ಪ್ರಶ್ನಿಸಿ ಜನರ ಪರವಾಗಿ ಧ್ವನಿ ಎತ್ತಬೇಕಿದ್ದ ಬಿಜೆಪಿ ಕೂಡ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿದೆ ಎಂದು ಅವರು ಟೀಕಿಸಿದ್ದಾರೆ.
ರಾಜ್ಯದ ನೂರಾರು ತಾಲೂಕುಗಳು ಬರಗಾಲದಿಂದ ಬಳಲುತ್ತಿವೆ. ರೈತರಿಗೆ ಬರ ಪರಿಹಾರ ವಿತರಣೆ, ಬಿಡದಿ ಟೌನ್ಶಿಪ್ ವಿವಾದ, ಮೇಕೆದಾಟು, ಭದ್ರಾ ಮೇಲ್ದಂಡೆ, ಕೃಷ್ಣಾ ಅಣೆಕಟ್ಟು ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳು ಚರ್ಚೆಯಾಗಬೇಕಿತ್ತು. ಆದರೆ ಈ ಯಾವ ವಿಚಾರಗಳಿಗೂ ಸಮಗ್ರ ಉತ್ತರ ಸಿಕ್ಕಿಲ್ಲ.
ಬೆಂಗಳೂರಿನ ಜಿಬಿಎ ಪಾರ್ಕಿಂಗ್ ನೀತಿ, ಕಸದ ಮಾಫಿಯಾ, ಕಸ ವಿಲೇವಾರಿ, ಸಂಚಾರ ದಟ್ಟಣೆ ಹಾಗೂ ನಗರದ ಮೂಲಸೌಕರ್ಯ ಸಮಸ್ಯೆಗಳು ಕೂಡ ಸದನದಲ್ಲಿ ಗಂಭೀರವಾಗಿ ಚರ್ಚೆಯಾಗಬೇಕಿತ್ತು. ಚುನಾವಣಾ ಆಯೋಗದ ಎಸ್ಐಆರ್ ಪ್ರಕ್ರಿಯೆಯಲ್ಲಿನ ನ್ಯೂನತೆಗಳು ಮತ್ತು ಮತದಾರರ ಪಟ್ಟಿಗೆ ಸಂಬಂಧಿಸಿದ ಆತಂಕಗಳ ಬಗ್ಗೆಯೂ ಸರ್ಕಾರ ಸ್ಪಷ್ಟನೆ ನೀಡಬೇಕಿತ್ತು.
ಕಾಂಗ್ರೆಸ್ ಸರ್ಕಾರಕ್ಕೆ ಪ್ರಶ್ನೆಗಳನ್ನು ಎದುರಿಸುವ ಧೈರ್ಯವಿಲ್ಲ; ಬಿಜೆಪಿಗೆ ಪ್ರಶ್ನೆಗಳನ್ನು ಕೇಳುವ ಪ್ರಾಮಾಣಿಕತೆ ಇಲ್ಲ. ಆಡಳಿತ ಪಕ್ಷ ಸದನವನ್ನು ಮೊಟಕುಗೊಳಿಸಿ ತಪ್ಪಿಸಿಕೊಳ್ಳುವ ಕೆಲಸ ಮಾಡಿದರೆ, ಪ್ರತಿಪಕ್ಷವು ನಾಗೇಂದ್ರ ವಿಚಾರವೊಂದನ್ನೇ ಮುಂದಿಟ್ಟು ಉಳಿದ ಜನಪರ ಸಮಸ್ಯೆಗಳನ್ನು ಕಡೆಗಣಿಸಿದೆ. ಇದು ಕಾಂಗ್ರೆಸ್–ಬಿಜೆಪಿ ಪಕ್ಷಗಳ ಹೊಂದಾಣಿಕೆಯ ರಾಜಕಾರಣದ ಅನುಮಾನವನ್ನು ಹುಟ್ಟುಹಾಕಿದೆ ಎಂದು ಮುಖ್ಯಮಂತ್ರಿ ಚಂದ್ರು ಆರೋಪಿಸಿದರು.
ಜನರ ತೆರಿಗೆ ಹಣದಲ್ಲಿ ನಡೆಯುವ ವಿಧಾನಮಂಡಲ ಅಧಿವೇಶನವನ್ನು ಕಾಂಗ್ರೆಸ್ ತನ್ನ ಅನುಕೂಲಕ್ಕೆ ತಕ್ಕಂತೆ ನಡೆಸಬಾರದು. ಅದೇ ರೀತಿ ಬಿಜೆಪಿ ಕೂಡ ಪ್ರತಿಪಕ್ಷದ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಬಾರದು. ಜನರ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ಸರ್ಕಾರ ಉತ್ತರ ಕೊಡಬೇಕು; ಬಿಜೆಪಿ ಉತ್ತರ ಪಡೆಯುವವರೆಗೆ ಹೋರಾಡಬೇಕು. ಎರಡೂ ಪಕ್ಷಗಳು ವಿಫಲವಾದರೆ ಜನರ ಪರವಾಗಿ ಆಮ್ ಆದ್ಮಿ ಪಕ್ಷ ಸದನದ ಹೊರಗೆ ಮತ್ತು ಜನರ ನಡುವೆ ಹೋರಾಟ ನಡೆಸಲಿದೆ ಎಂದು ಚಂದ್ರು ಎಚ್ಚರಿಸಿದರು.
