ಕೊಳ್ಳೇಗಾಲ: ಡಿ. ದೇವರಾಜ ಅರಸು ಅವರು ಕರ್ನಾಟಕದ ಸಾಮಾಜಿಕ ಕ್ರಾಂತಿಯ ಹರಿಕಾರರಾಗಿ, ರಾಜ್ಯದಲ್ಲಿ ಹಿಂದುಳಿದ ವರ್ಗಗಳು ಮತ್ತು ಬಡವರ ಪರವಾಗಿ ಐತಿಹಾಸಿಕ ಸುಧಾರಣೆಗಳನ್ನು ತಂದ ಮುಖ್ಯಮಂತ್ರಿಗಳಾಗಿದ್ದರು ಎಂದು ಚಾ.ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಪಿ.ದೇವರಾಜು ಬಣ್ಣಿಸಿದರು.
ಪಟ್ಟಣದ ತಾ.ಪಂ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮಾಜಿ ಮುಖ್ಯಮಂತ್ರಿ ದಿ. ಡಿ.ದೇವರಾಜು ಅರಸು ರವರ 111 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಅವರು ಮಾತನಾಡಿದರು.
ಉಳುವವನೇ ಹೊಲದ ಒಡೆಯ ಎಂಬ ತತ್ವದಡಿ ಪ್ರಗತಿಪರ ಭೂ ಸುಧಾರಣೆ ಜಾರಿಗೆ ತಂದು, ಲಕ್ಷಾಂತರ ಬಡ ರೈತರಿಗೆ ಭೂಮಿಯ ಹಕ್ಕು ಕಲ್ಪಿಸಿದರು,
ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಎಲ್.ಜಿ. ಹಾವನೂರು ಆಯೋಗವನ್ನು ನೇಮಿಸಿ, ಮೀಸಲಾತಿಗೆ ವೈಜ್ಞಾನಿಕ ರೂಪ ನೀಡಿದರು,
1973 ನವೆಂಬರ್ 1 ರಂದು ಮೈಸೂರು ರಾಜ್ಯಕ್ಕೆ ಅಧಿಕೃತವಾಗಿ “ಕರ್ನಾಟಕ” ಎಂದು ನಾಮಕರಣ ಮಾಡಿದರು,
ಸಮಾಜದ ಅಂಚಿನಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಜನರಿಗೆ ರಾಜಕೀಯ ಮತ್ತು ಸಾಮಾಜಿಕ ಧ್ವನಿ ಹಾಗೂ ಅವಕಾಶಗಳನ್ನು ತಂದುಕೊಟ್ಟರು,
ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಗೆ ಪ್ರೋತ್ಸಾಹ ನೀಡಿದರು ಮತ್ತು ಇಂದಿನ ಎಲೆಕ್ಟ್ರಾನಿಕ್ ಸಿಟಿ ನಿರ್ಮಾಣಕ್ಕೆ ಕಾರಣೀಭೂತರಾದರು
ಎಂದು ಅರಸು ಅವರ ಸಾಧನೆಗಳನ್ನು ವಿವರಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕುಮಾರ್ ಅವರು ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ್ದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಶಿರೆಸ್ತದಾರ್ ಕೃಪಕಾರ್, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮೀನಾ.ಡಿ, ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಜೋಸೆಫ್ ಅಲೆಕ್ಸಾಂಡರ್, ಕಸಾಪ ಅಧ್ಯಕ್ಷ ನಾಗರಾಜು ಮತ್ತಿತರರು ಹಾಜರಿದ್ದರು.
