ಮೈಸೂರು: ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸರ್ಕಾರ 6 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು,ಟೆಂಡರ್ ಕರೆದು ಕೂಡಲೇ ಕೆಲಸ ಆರಂಭಿಸುವಂತೆ ನಗರಪಾಲಿಕೆ ಆಡಳಿತಾಧಿಕಾರಿ ನಿತೇಶ್ ಪಾಟೀಲ್ ಸೂಚಿಸಿದರು.
ನಗರಪಾಲಿಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತೆರವು ಕಾರ್ಯಾಚರಣೆಯಿಂದ ಹಾನಿಗೊಂಡಿರುವ ರಾಜಮಾರ್ಗದ ಫುಟ್ಪಾತ್ ದುರಸ್ತಿ ಕೆಲಸವನ್ನೂ ಈ ಅನುದಾನದಲ್ಲೇ ಕೈಗೊಳ್ಳಬೇಕು. ರಸ್ತೆ ಸಂಚಾರ ನಿರ್ವಹಣೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ಕೆಲಸವನ್ನು ಕಾಮಗಾರಿಗೆ ಸೇರಿಸಿಕೊಳ್ಳಬೇಕು ಎಂದು ತಿಳಿಸಿದರು.
ನಗರದಲ್ಲಿ ಜಿಬಿಎ ಮಾದರಿಯಲ್ಲಿ ಅನಾಥ ವಾಹನಗಳನ್ನು ನಿಲುಗಡೆ ಮಾಡಿರುವುದನ್ನು ತೆರವು ಮಾಡುವಂತೆ ಆದೇಶಿಸಿದರು.
ಜಂಬೂಸವಾರಿ ಮೆರವಣಿಗೆ ಸಾಗುವ ಮಾರ್ಗದಲ್ಲಿರುವ ಎಲ್ಲ ಸಾರ್ವಜನಿಕ ಶೌಚಾಲಯಗಳನ್ನು ಸಮಗ್ರವಾಗಿ ದುರಸ್ತಿ ಮಾಡಿ, ಬಳಕೆಗೆ ಯೋಗ್ಯವಾಗುವಂತೆ ಸಿದ್ಧಪಡಿಸಬೇಕು ಎಂದು ಆಡಳಿತಾಧಿಕಾರಿಗಳು ಸೂಚಿಸಿದರು.
ಈ ಕಾರ್ಯಾಚರಣೆಯನ್ನು ಕಟ್ಟುನಿಟ್ಟಾಗಿ ನಡೆಸಲು ನಗರಪಾಲಿಕೆಯಿಂದಲೇ ಪ್ರಮಾಣಿತ ಕಾರ್ಯವಿಧಾನ ಎಸ್ಒಪಿ ರಚಿಸಲಾಗುವುದು. ಅದರಂತೆ ಎಲ್ಲ ವಲಯಗಳಲ್ಲೂ ಕೆಲಸವಾಗಬೇಕು. ಇದಕ್ಕೆ ವಲಯ ಆಯುಕ್ತರು, ಅಭಿವೃದ್ಧಿ ಅಧಿಕಾರಿಗಳು ಮತ್ತು ಆರೋಗ್ಯ ನಿರೀಕ್ಷಕರು ಜವಾಬ್ದಾರರಾಗಿರಬೇಕು ಎಂದು ನಗರಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ತಿಳಿಸಿದರು.
ನಗರದ ಪ್ರಮುಖ ರಸ್ತೆಗಳು ಮತ್ತು ವಾಣಿಜ್ಯ ಪ್ರದೇಶಗಳ ಫುಟ್ಪಾತ್ ಒತ್ತುವರಿ ತೆರವಿಗೆ ಆದ್ಯತೆ ನೀಡಬೇಕು. ಹೆಚ್ಚು ವಾಹನ ದಟ್ಟಣೆ ಇರುವ ರಸ್ತೆಗಳು ಮತ್ತು ಅಪಘಾತ ಸಾಧ್ಯತೆ ಇರುವ ಸ್ಥಳಗಳಲ್ಲಿ ಮೊದಲು ಕಾರ್ಯಾಚರಣೆ ನಡೆಸಬೇಕು. ಸಯ್ಯಾಜಿರಾವ್ ರಸ್ತೆ, ಮೀನಾ ಬಜಾರ್ ಸೇರಿದಂತೆ ಹಲವು ರಸ್ತೆಗಳಲ್ಲಿ ಈ ಹಿಂದೆ ಕಾರ್ಯಾಚರಣೆ ನಡೆಸಿದರೂ ಮತ್ತೆ ವ್ಯಾಪಾರ ಆರಂಭವಾಗಿದೆ. ಇದರ ಹಿಂದೆ ಅಧಿಕಾರಿಗಳು ಮತ್ತು ರಾಜಕಾರಣಿಗಳು ಶಾಮೀಲಾಗಿದ್ದಾರೆ ಎಂಬ ಆರೋಪಗಳಿವೆ. ಆದ್ದರಿಂದ ಈ ಸ್ಥಳಗಳಲ್ಲಿ ನಿರಂತರವಾಗಿ ಕಾರ್ಯಾಚರಣೆ ನಡೆಸಬೇಕು ಎಂದು ಅವರು ಸೂಚಿಸಿದರು.
ಡಿಸಿಪಿ ಸುಂದರ್ರಾಜ್ ಮಾತನಾಡಿ, ಪಾಲಿಕೆಯ ಕಾರ್ಯಾಚರಣೆಗೆ ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ. ಅಗತ್ಯವಿರುವ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಎಸಿಪಿ ಶಿವಶಂಕರ್, ಪಾಲಿಕೆ ಹೆಚ್ಚುವರಿ ಆಯುಕ್ತೆ ವೀಣಾ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
