(ವರದಿ:ಎಸ್. ಪುಟ್ಟಸ್ವಾಮಿಹೊನ್ನೂರು
ಯಳಂದೂರು)
ಯಳಂದೂರು: ಯಳಂದೂರು ಪಟ್ಟಣ ಪಂಚಾಯಿತಿ ವತಿಯಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಸಿಬ್ಬಂದಿ ಫುಟ್ ಪಾತ್ ಒತ್ತುವರಿ ಕಾರ್ಯಾಚರಣೆ ಆರಂಭಿಸಿದರು.
ಪಟ್ಟಣದ ನಾಡಮೇಗಲ್ಲಮ್ಮ ದೇಗುಲದ ಬಳಿಯಿಂದ ಕಾರ್ಯಾಚರಣೆಯನ್ನು ಆರಂಭಿಸಲಾಯಿತು.
ರಸ್ತೆ ಬದಿಯಲ್ಲಿರುವ ಫುಟ್ ಪಾತ್ ಹಾಗೂ ಇದರ ಪಕ್ಕದಲ್ಲಿರುವ ಚರಂಡಿ ಮೇಲೆ ಅಂಗಡಿ ಮಾಲೀಕರು ಹಾಕಿಕೊಂಡಿದ್ದ ವಸ್ತುಗಳನ್ನು ಹಾಗೂ ಶೀಟ್ ಗಳನ್ನು ತೆರವು ಮಾಡಲಾಯಿತು.
ಈ ಸಂದರ್ಭದಲ್ಲಿ ಕೆಲ ಅಂಗಡಿ ಮಾಲೀಕರು ಏಕಾಏಕಿ ತಮ್ಮ ಆಸ್ತಿಗಳಿಗೆ ಜೆಸಿಬಿ ಯಂತ್ರದ ಮೂಲಕ ಹಾನಿ ಮಾಡುತ್ತಿರುವುದನ್ನು ಖಂಡಿಸಿ ಪಟ್ಟಣ ಪಂಚಾಯಿತಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ಘಟನೆಯೂ ಜರುಗಿತು.
ರಸ್ತೆ ಪಕ್ಕದಲ್ಲಿರುವ ಪಾದಾಚಾರಿ ಮಾರ್ಗದಲ್ಲಿ ಅಳವಡಿಸಿದ್ದ ಅಂಗಡಿಗಳ ಜಾಹೀರಾತು ಫಲಕಗಳು, ಪಟ್ಟಣದ ಗಾಂಧಿ ಸರ್ಕಲ್ ನಲ್ಲಿ ಇದ್ದ ತಳ್ಳುಗಾಡಿಗಳು ಹೂವು, ಹಣ್ಣಿನ ಅಂಗಡಿ, ತಳ್ಳುಗಾಡಿಯ ಹೋಟೆಲ್ ಗಳನ್ನು ತೆರವುಗೊಳಿಸಲಾಯಿತು. ಕೆಲವರು ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿಗಳನ್ನು ತೆರವುಗಳುಸುತ್ತಿದ್ದ ದೃಶ್ಯವೂ ಕಂಡುಬಂದಿತು.
ಈ ಸಂದರ್ಭದಲ್ಲಿ ಮುಖ್ಯ ಅಧಿಕಾರಿ ಎಂ. ಪಿ. ಮಹೇಶ್ ಕುಮಾರ್ ಮಾತನಾಡಿ, ನ್ಯಾಯಾಲಯದ ಆದೇಶದಂತೆ ಪಾದಾಚಾರಿ ಮಾರ್ಗಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಕೈಗೊಳ್ಳಲಾಗಿದೆ, ಈಗಾಗಲೇ ಈ ಬಗ್ಗೆ ನಾವು ಅನೇಕ ಬಾರಿ ಸೂಚನೆಯನ್ನು ನೀಡಿದ್ದೇವೆ ಕೆಲವರು ಸ್ವಯಂ ಪ್ರೇರಿತರಾಗಿ ತಮ್ಮ ವಸ್ತುಗಳನ್ನು ತೆರವುಗೊಳಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಸೂಚನೆ ನೀಡಿದ್ದರೂ ತೆರವು ಗೊಳಿಸದ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಲಾಗಿದೆ. ಇದು ಪೂರ್ಣಗೊಳ್ಳುವವರೆಗೂ ನಮ್ಮ ಕಾರ್ಯಾಚರಣೆ ಮುಂದುವರೆಯಲಿದೆ. ಇದರಿಂದ ಪಾದಚಾರಿ ಮಾರ್ಗಗಳು ತೆರೆದುಕೊಳ್ಳುತ್ತವೆ. ಹಾಗಾಗಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗುತ್ತದೆ ಈ ನಿಟ್ಟಿನಲ್ಲಿ ಕಾರ್ಯಾಚರಣೆಯನ್ನು ಮಾಡಲಾಗುತ್ತಿದೆ, ಸಾರ್ವಜನಿಕರಿಂದ ಹಾಗೂ ವ್ಯಾಪಾರಿಗಳಿಂದ ಇದಕ್ಕೆ ನಮಗೆ ಸೂಕ್ತ ಸ್ಪಂದನೆ ಸಿಕ್ಕಿದೆ ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಆಹಾರ ನಿರೀಕ್ಷಕ ರಾಘವೇಂದ್ರ, ಸಿಬ್ಬಂದಿ ಮಲ್ಲಿಕಾರ್ಜುನ, ರಘು, ಅರವಿಂದ್ ಸೇರಿದಂತೆ ಪೌರಕಾರ್ಮಿಕರು ಹಾಜರಿದ್ದರು.
