ಮೈಸೂರು: ಮೈಸೂರಿನಲ್ಲಿ ಇತ್ತೀಚೆಗೆ ಸೈಬರ್ ಕ್ರೈಂ ಹೆಚ್ಚಾಗಿದ್ದು, ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಕೊಡುವುದಾಗಿ ನಂಬಿಸಿ ಸೈಬರ್ ವಂಚಕರು ನಗರದ ಇಬ್ಬರು ನಿವಾಸಿಗಳಿಂದ ಒಟ್ಟು 27.28 ಲಕ್ಷ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಈ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಪ್ರಕರಣ 1: ಕೇಂದ್ರ ಸಚಿವರ ಹೆಸರಿನಲ್ಲಿ ನಕಲಿ ಜಾಹೀರಾತು 12.93 ಲಕ್ಷ ನಷ್ಟ
ಜೆಪಿ ನಗರದ 52 ವರ್ಷದ ವ್ಯಕ್ತಿಯೊಬ್ಬರು ಫೇಸ್ಬುಕ್ನಲ್ಲಿ ಕೇಂದ್ರ ಹಣಕಾಸು ಸಚಿವರ ವಿಡಿಯೋ ಬಳಸಿ ಸೃಷ್ಟಿಸಲಾಗಿದ್ದ ನಕಲಿ ಹೂಡಿಕೆ ಜಾಹೀರಾತಿಗೆ ಮರುಳಾಗಿದ್ದಾರೆ.
ಜೂನ್ 19 ರಿಂದ ಜುಲೈ 2 ರವರೆಗೆ ವಂಚಕರು ವಾಟ್ಸಾಪ್ ಗುಂಪಿಗೆ ಸೇರಿಸಿಕೊಂಡು ಸ್ಟಾಕ್ ಮಾರ್ಕೆಟ್ನಲ್ಲಿ ಖಾತ್ರಿ ಲಾಭ ಎಂದು ನಂಬಿಸಿದ್ದಾರೆ. ಆರಂಭದಲ್ಲಿ 65,000 ವರೆಗೆ ಲಾಭದ ರೂಪದಲ್ಲಿ ಅವರ ಖಾತೆಗೆ ವಾಪಸ್ ಕೂಡ ಕಳುಹಿಸಿ ನಂಬಿಕೆ ಹುಟ್ಟಿಸಿದ್ದಾರೆ.
ನಂತರ ಹೆಚ್ಚಿನ ಲಾಭಕ್ಕೆ ಹೆಚ್ಚುವರಿ ಠೇವಣಿ ಕಟ್ಟಬೇಕು ಎಂದು ಹೇಳಿದ್ದಾರೆ. ಹೀಗೆ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 12.93 ಲಕ್ಷ ಹಣ ವರ್ಗಾಯಿಸಿದ ನಂತರ ವಂಚಕರು ಸಂಪರ್ಕ ಕಡಿದುಕೊಂಡಿದ್ದಾರೆ. ಆಗ ವ್ಯಕ್ತಿಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ.
ಪ್ರಕರಣ 2: ನಕಲಿ ಟ್ರೇಡಿಂಗ್ ಆ್ಯಪ್ ಮೂಲಕ 15.29 ಲಕ್ಷ ವಂಚನೆ
ಎರಡನೇ ಪ್ರಕರಣದಲ್ಲಿ ಸಿದ್ದಾರ್ಥನಗರದ 38 ವರ್ಷದ ಉದ್ಯೋಗಿಯೊಬ್ಬರಿಗೆ ಆನ್ಲೈನ್ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹಣ ದುಪ್ಪಟ್ಟು ಮಾಡಿಕೊಡುವುದಾಗಿ ವಂಚಕರು ಆಮಿಷ ಒಡ್ಡಿದ್ದಾರೆ.
ವಂಚಕರು ಮೊದಲು ನಕಲಿ ಮೊಬೈಲ್ ಟ್ರೇಡಿಂಗ್ ಆ್ಯಪ್ ಡೌನ್ಲೋಡ್ ಮಾಡಿಸಿದ್ದಾರೆ. ಆ ಆ್ಯಪ್ನಲ್ಲಿ ಲಾಭ ತೋರಿಸಿ ನಂಬಿಕೆ ಹುಟ್ಟಿಸಿದ್ದಾರೆ. ಬಳಿಕ “ಪೋರ್ಟ್ಫೋಲಿಯೋ ಅಪ್ಗ್ರೇಡ್, ತೆರಿಗೆ, ಕಮಿಷನ್” ಹೆಸರಿನಲ್ಲಿ ಹಂತಹಂತವಾಗಿ 15.29 ಲಕ್ಷ ಹಣವನ್ನು ಹೂಡಿಕೆ ನೆಪದಲ್ಲಿ ದೋಚಿದ್ದಾರೆ. ಹಣ ವಾಪಸ್ ಕೇಳಿದಾಗ ವಂಚಕರು ನಂಬರ್ ಬ್ಲಾಕ್ ಮಾಡಿದ್ದಾರೆ.
ಎರಡೂ ಪ್ರಕರಣಗಳನ್ನು ಮೈಸೂರು ಸೈಬರ್ ಕ್ರೈಂ ಪೊಲೀಸರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ವಂಚಕರಿಗೆ ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.
ಸೋಶಿಯಲ್ ಮೀಡಿಯಾ ಜಾಹೀರಾತುಗಳನ್ನು ನಂಬಬೇಡಿ,ಕೇಂದ್ರ ಸಚಿವರು, ಸೆಲೆಬ್ರಿಟಿಗಳ ಹೆಸರಿನಲ್ಲಿ ಬರುವ ಹೂಡಿಕೆ ಜಾಹೀರಾತುಗಳು ಶೇ 99 ರಷ್ಟು ನಕಲಿ.
ಪ್ಲೇ ಸ್ಟೋರ್ನಲ್ಲಿ ಇಲ್ಲದ, ಲಿಂಕ್ ಮೂಲಕ ಬರುವ ಟ್ರೇಡಿಂಗ್ ಆ್ಯಪ್ಗಳನ್ನು ಡೌನ್ಲೋಡ್ ಮಾಡಬೇಡಿ.
ಮೊದಲು ಸ್ವಲ್ಪ ಲಾಭ ಕೊಟ್ಟು ನಂತರ ದೊಡ್ಡ ಮೊತ್ತ ಕೇಳುವುದು ಇವರ ಟ್ರಿಕ್.ಹಾಗಾಗಿ ಇದನ್ನೆಲ್ಲ ನಂಬಬಾರದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದೂರು ನೀಡಿ: ಇಂತಹ ವಂಚನೆಗೆ ಒಳಗಾದರೆ ತಕ್ಷಣ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ. http://cybercrime.gov.in ನಲ್ಲಿ ದೂರು ದಾಖಲಿಸುವಂತೆ ಸಲಹೆ ನೀಡಿದ್ದಾರೆ.
ಕಳೆದ ಒಂದು ತಿಂಗಳಲ್ಲಿ ಮೈಸೂರಿನಲ್ಲಿ ಆನ್ಲೈನ್ ಹೂಡಿಕೆ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಗ್ಯಾರಂಟಿ ರಿಟರ್ನ್, ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭ ಎಂದು ಹೇಳುವ ಯಾರನ್ನೂ ನಂಬಬೇಡಿ ಎಂದು ಪೊಲೀಸರು ಜನರಲ್ಲಿ ಮನವಿ ಮಾಡಿದ್ದಾರೆ.
