ಬೆಂಗಳೂರು: ನಮ್ಮ ಸಚಿವ ಸಂಪುಟದಲ್ಲಿ ಮಹಿಳೆಗೆ ಸ್ಥಾನ ಇದ್ದೇ ಇರುತ್ತದೆ. ನಾವು ಮಹಿಳೆಯರಿಗೆ ಹೆಚ್ಚು ಶಕ್ತಿ ನೀಡುತ್ತೇವೆ ಎಂದು ಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.
ವಿಧಾನಸೌಧ ಆವರಣದಲ್ಲಿ ಎಸ್ ನಿಜಲಿಂಗಪ್ಪ ಅವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸಿಎಂ ಮಾಧ್ಯಮಗಳೊಂದಿಗೆ ಮಾತನಾಡಿದರು.
ರಾಹುಲ್ ಗಾಂಧಿ ಅವರು ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಚರ್ಚೆ ಮಾಡಿದ್ದಕ್ಕೆ ಕಿರಣ್ ರಿಜಿಜು ಅವರು ಕರ್ನಾಟಕ ಸಚಿವ ಸಂಪುಟದಲ್ಲಿ ಮಹಿಳೆಯರಿಲ್ಲ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ,ಈ ಮಸೂದೆಯನ್ನು ರೂಪಿಸಿ, ಲೋಕಸಭೆಯಲ್ಲಿ ಪಾಸ್ ಮಾಡಿದ್ದವರು ಕಾಂಗ್ರೆಸ್ ನವರು. ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ನಾವು ಮಹಿಳೆಯರಿಗೆ ಹೆಚ್ಚು ಸ್ಥಾನ ನೀಡಿದ್ದೆವು. ಸಧ್ಯದಲ್ಲೇ ಸಂಪುಟ ವಿಸ್ತರಣೆ ವಿಚಾರ ಬಗೆಹರಿಯಲಿದೆ. ರಿಜಿಜು ಅವರು ಕಾಂಗ್ರೆಸ್ ಪಕ್ಷದ ಬಗ್ಗೆ ಚಿಂತಿಸುವುದು ಬೇಡ, ಅವರು ತಮ್ಮ ಪಕ್ಷ ಹಾಗೂ ಸರ್ಕಾರದ ಬಗ್ಗೆ ಆಲೋಚಿಸಲಿ ಎಂದು ತಿರುಗೇಟು ನೀಡಿದರು.
ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ಅವರ ಪುಣ್ಯ ಸ್ಮರಣೆ ಅಂಗವಾಗಿ ನಾವೆಲ್ಲರೂ ಅವರಿಗೆ ಗೌರವ ಸಲ್ಲಿಸಿ ಸ್ಮರಿಸುತ್ತಿದ್ದೇವೆ. ನಾನು ಅನೇಕ ಬಾರಿ ನಿಜಲಿಂಗಪ್ಪ ಅವರ ಜೊತೆ ಚರ್ಚೆ ಮಾಡಿದ್ದೇನೆ. ನಾನು ಹಾಗೂ ಎಸ್ ಎಂ ಕೃಷ್ಣ ಅವರು ಹಲವು ಬಾರಿ ನಿಜಲಿಂಗಪ್ಪ ಅವರ ಜೊತೆಗೆ ಹೋಗಿದ್ದೇವೆ. ಸೋನಿಯಾ ಗಾಂಧಿ ಅವರು ಕೂಡ ನಿಜಲಿಂಗಪ್ಪ ಅವರನ್ನು ಭೇಟಿ ಮಾಡಬೇಕು ಎಂದು ಚಿತ್ರದುರ್ಗಕ್ಕೆ ಆಗಮಿಸಿದ್ದರು. ನಾನು ಎರಡನೇ ಬಾರಿಗೆ ಶಾಸಕನಾದಾಗಲೂ ಕರ್ನಾಟಕ ಭವನದಲ್ಲಿ ಅವರನ್ನು ಭೇಟಿ ಮಾಡಿದ್ದೆ ಎಂದು ಡಿಕೆಶಿ ಸ್ಮರಿಸಿದರು.
ನಿಜಲಿಂಗಪ್ಪ ಅವರು ಕರ್ನಾಟಕಕ್ಕೆ ಗೌರವ ತಂದ ಧೀಮಂತ ನಾಯಕ. ಕರ್ನಾಟಕದ ಏಕೀಕರಣಕ್ಕೆ ದೊಡ್ಡ ಹೋರಾಟ ಮಾಡಿದ್ದರು. ಮಹಾತ್ಮಾ ಗಾಂಧೀಜಿ ಅವರ ಚಿಂತನೆ ಅಳವಡಿಸಿಕೊಂಡ ನಾಯಕರು. ನಮ್ಮ ಕರ್ನಾಟಕದಿಂದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದವರು ನಿಜಲಿಂಗಪ್ಪ ಅವರು. ಅವರ ಬಳಿಕ ಇಂದು ಮಲ್ಲಿಕಾರ್ಜುನ ಖರ್ಗೆ ಅವರು ಅಧ್ಯಕ್ಷರಾಗಿದ್ದಾರೆ. ಕೇಂದ್ರದಲ್ಲಿ ಕನ್ನಡ ಹಾಗೂ ಕರ್ನಾಟಕದ ಏಕೀಕರಣಕ್ಕೆ ಧ್ವನಿ ಎತ್ತಿದ ನಾಯಕ ಎಂದು ಬಣ್ಣಿಸಿದರು.
ಸರಳತೆ ನಿಜಲಿಂಗಪ್ಪ ಅವರ ಆಸ್ತಿ. ಅವರ ಆಸ್ತಿ ಬೇರೆಯವರ ಪಾಲಾಗಬಾರದು ಎಂದು ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಆಸ್ತಿಯನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಜಾತ್ಯಾತೀತ ತತ್ವ ಬಸವಣ್ಣನವರ ಚಿಂತನೆಯನ್ನು ಪ್ರತಿಬಿಂಬಿಸಿದ ಧೀಮಂತ ನಾಯಕರು ಅವರು, ಮುಖ್ಯಮಂತ್ರಿಯಾಗಿದ್ದರು. ನಾವೆಲ್ಲರೂ ಅವರ ಹಾದಿಯಲ್ಲಿ ಸಾಗಬೇಕು ಎಂದು ಸಿಎಂ ತಿಳಿಸಿದರು.
ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಎಐಸಿಸಿ ಅಧ್ಯಕ್ಷರಾಗಿ ಅವರು ಕೊಟ್ಟ ಮಾರ್ಗದರ್ಶನಗಳು, ದಾಖಲೆಗಳಲ್ಲಿ ಇವೆ. 1924ರ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ನಿಜಲಿಂಗಪ್ಪ ಅವರ ಪಾತ್ರ ದೊಡ್ಡದಾಗಿತ್ತು. ನೀರಾವರಿಗೆ ಭದ್ರಾ ಹಾಗೂ ಕೃಷ್ಣ ಮೇಲ್ದಂಡೆ ಯೋಜನೆ ಜಾರಿಗೆ ಪ್ರಮುಖ ಪಾತ್ರ ವಹಿಸಿದ ನಾಯಕರು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ನಿಜಲಿಂಗಪ್ಪ ಅವರು ಸಿಎಂ ಆಗಿದ್ದರೂ ಅವರ ಪುತ್ರಿ ನಾನು ಓದಿದ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ಅವರು ಸರಳ ಜೀವನ ನಡೆಸಿದ್ದರು. ಅವರ ಮಾರ್ಗದರ್ಶನ ನಮಗೆ ಸದಾ ಅಗತ್ಯ ಎಂದು ತಿಳಿಸಿದರು.
