ಮುದ್ದೇಬಿಹಾಳ: ಜಾನಪದ ಎಂದಿಗೂ ನಶಿಸುವುದಿಲ್ಲ, ಅದು ಅವಿನಾಶಿ. ಕಾಲಕ್ರಮೇಣ ಅದು ಪರಿವರ್ತನೆ ಗೊಳ್ಳುತ್ತಲೇ ಇರುತ್ತದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರಾದ ಡಾ. ಜಾನಪದ ಎಸ್. ಬಾಲಾಜಿ ಅವರು ಹೇಳಿದರು.
ಮುದ್ದೇಬಿಹಾಳದ ಪರಿಶಿಷ್ಟ ಜಾತಿ ಹಾಗೂ ಪಂಗಡದ ವಸತಿ ಪ್ರಥಮ ದರ್ಜೆ ಕಾಲೇಜಿನ ಹಾಡಳಗೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಾನಪದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಾಡುವುದು, ಕುಣಿಯುವುದು ಮಾತ್ರ ಜಾನಪದವಲ್ಲ, ಅದು ಒಂದು ಸಮಗ್ರ ಪರಂಪರೆ. ತೊಟ್ಟಿಲಿಂದ ಚಟ್ಟದವರೆಗೆ ಸಾಗುವ ಜೀವನ ಪಯಣವೇ ಜಾನಪದ ಎಂದು ಅವರು ವಿವರಿಸಿದರು.
ಕಾಲೇಜು ಮಟ್ಟದಲ್ಲಿ ಜಾನಪದಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿರುವುದು ಸಂತೋಷದ ವಿಷಯ, ಪ್ರಾಂಶುಪಾಲರಾದ ಡಾ. ಎಸ್. ಎಲ್. ಪಾಟೀಲ್ ಅವರ ಆಸಕ್ತಿ ಇತರ ಕಾಲೇಜುಗಳಿಗೆ ಮಾದರಿಯಾಗಿದೆ ಎಂದು ಡಾ.ಜಾನಪದ ಎಸ್.ಬಾಲಾಜಿ
ಪ್ರಶಂಸಿಸಿದರು.
ವಿದ್ಯಾರ್ಥಿಗಳು ಜಾನಪದ ಉಳಿಸಿ ಬೆಳೆಸುವಲ್ಲಿ ಸಕ್ರಿಯವಾಗಿ ಕೈಜೋಡಿಸಬೇಕೆಂದು ಅವರು ಕರೆ ನೀಡಿದರು.
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಪುಂಡಲೀಕ ಮುರಳ್ ಅವರು ಮಾತನಾಡಿ, ಅಜ್ಞಾತವಾಗಿರುವ ಅನೇಕ ಜಾನಪದ ಕಲೆಗಳನ್ನು ಉಳಿಸುವ ಪ್ರಯತ್ನಗಳು ಇತ್ತೀಚೆಗೆ ಆರಂಭವಾಗಿವೆ. ಯುವಜನತೆ ಜಾನಪದದತ್ತ ಹೆಚ್ಚು ಮುಖ ಮಾಡಬೇಕು ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ಎಲ್. ಪಾಟೀಲ್ ಅವರು ಮಾತನಾಡಿ, ಕಾಲೇಜಿನಲ್ಲಿ ಸಂಸ್ಕೃತಿ ಘಟಕದ ಮೂಲಕ ಜಾನಪದ ಚಟುವಟಿಕೆಗಳನ್ನು ಮುಂದುವರೆಸಲಾಗುವುದು, ವಿದ್ಯಾರ್ಥಿಗಳು ಜಾನಪದ ಕಲಿಕೆ ಮೂಲಕ ಬಹಳಷ್ಟು ಜ್ಞಾನ ಮತ್ತು ಮೌಲ್ಯಗಳನ್ನು ಪಡೆದುಕೊಳ್ಳುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಅನಿಲ್ ಕುಮಾರ್ ಡಿ.ಕೆ., ಐಕ್ಯೂಎಸಿ ಸಂಯೋಜಕರಾದ ಪ್ರೊ. ರವಿ ಕಟ್ಟಿಮನಿ, ಜಾನಪದ ಯುವ ಬ್ರಿಗೇಡಿನ ಮುದ್ದೇಬಿಹಾಳ್ ತಾಲ್ಲೂಕು ಸಂಚಾಲಕರಾದ ರಂಜಾನ್, ವಿಜಯಪುರ ಸಂಚಾಲಕರಾದ ಸತೀಶ್ ನಾಯಕ್, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರಾಜುಗೌಡ ತುಂಬಗಿ, ನಗರ ಸಂಚಾಲಕರಾದ ಕೃಷ್ಣ ಕುಂಬಾರ, ಸಚಿನ್ ಚಾಲವಾದಿ, ಚಂದ್ರ ಮುಖಿಹಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
