ಮೈಸೂರು: ವ್ಯಕ್ತಿಯೊಬ್ಬರು ಪ್ರಯಾಣಿಸುತ್ತಿದ್ದ ಆಟೋ ಹತ್ತಿ ದಾರಿ ಮಧ್ಯೆ ನಿಲ್ಲಿಸಿ ದರೋಡೆ ಮಾಡಿದ್ದ ನಾಲ್ವರು ಕತರ್ನಕ್ ಆಸಾಮಿಗಳನ್ನು ಜೆ.ಪಿ.ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರು ನಗರದ ಜೆ.ಪಿ.ನಗರದ ವಿನೋದ್ ಎಂಬುವರು ದರೋಡೆ ಸಂಬಂಧ
ದೂರು ದಾಖಲಿಸಿದ್ದರು.
ಮೈಸೂರಿನ ಗೌಶಿಯನಗರದ
ಸೈಯದ್ ಶಫಿಕ್ (35),ಕೆ.ಆರ್.ನಗರದ
ಮುಸ್ತಾಕ್ @ ನಾಗು ಬಾಬು ಕೀನ್ ಆಫಾಕ್ (24), ಗೌಶಿಯಾನಗರದ
ಸುಲ್ತಾನ್ ಪಾಷಾ (26),ರಾಜೀವನಗರ
ಸೈಯದ್ ಸುಲ್ತಾನ್ (30) ಬಂಧಿತ ಆರೋಪಿಗಳು.
ಆ.2 ರಂದು ರಾತ್ರಿ ಸುಮಾರು 10 ಗಂಟೆಯಲ್ಲಿ ವಿನೋದ್ ಅವರು ಜೆ.ಪಿ.ನಗರದಿಂದ ಪಾಂಡವಪುರ ಆಸ್ಪತ್ರೆಗೆ ಹೋಗಲು ಆಟೋ ಹತ್ತಿದ್ದರು.
ಸ್ವಲ್ಪ ದೂರ ಹೋದ ನಂತರ ಮತ್ತೊಬ್ಬ ವ್ಯಕ್ತಿ ಆಟೋ ಹತ್ತಿ,ಕೋರಿ ರಸ್ತೆಯಲ್ಲಿ ನಿಲ್ಲಿಸಿ ಎಂದು ಹೇಳಿದ್ದಾನೆ. ಗಿಲ್ಡ್ ಪಕ್ಕದಲ್ಲಿ ಆಟೋ ನಿಲ್ಲಿಸುತ್ತಿದ್ದಂತೆ ಮತ್ತೆ 4 ಜನ ಕಾರಿನಿಂದ ಇಳಿದು ಬಂದು ವಿನೋದ್ ಮೇಲೆ ಹಲ್ಲೆ ನಡೆಸಿ, ಚಿನ್ನದ ಚೈನ್, ಮೊಬೈಲ್ ಫೋನ್ ಮತ್ತು 30 ಸಾವಿರ ರೂ. ದೋಚಿ ಪರಾರಿಯಾಗಿದ್ದರು.
ಈ ಸಂಬಂಧ ಜೆ.ಪಿ.ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.
ಪೊಲೀಸ್ ಹೆಚ್ಚುವರಿ ಆಯುಕ್ತರಾದ ಮಲ್ಲಿಕ್.ಎಸ್ ಮತ್ತು ಡಿಸಿಪಿ ನಾಗೇಶ್.ಎನ್ ನೇತೃತ್ವದಲ್ಲಿ, ಇನ್ಸ್ಪೆಕ್ಟರ್ ಎಸ್.ಪಿ.ದೇವರಾಜ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಿಂದ ಒಂದು ಆಟೋ, ಎರಡು ಮೊಬೈಲ್ ಫೋನ್, ಒಂದು ಚಿನ್ನದ ಚೈನ್ ಮತ್ತು 30 ಸಾವಿರ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದ್ದು,
ಉಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.
