ಮೈಸೂರು: ಮೈಸೂರಿನ ಮಥುರ ನಗರದಲ್ಲಿರುವ ಪ್ರಾಂಶುಪಾಲ ಸಿ.ಆರ್. ದಿನೇಶ್ ಅವರ ನಿವಾಸದಲ್ಲಿ ಇಂದು ಅಪರೂಪದ ಒಲಿಯಾಂಡರ್ ಹಾಕ್ಮಾತ್ (Daphnis nerii) ಪತಂಗ ಕಾಣಿಸಿಕೊಂಡು ಪ್ರಕೃತಿ ಪ್ರಿಯರು ಹಾಗೂ ಪರಿಸರಾಸಕ್ತರ ಗಮನ ಸೆಳೆಯಿತು.
ಲೆಪಿಡೋಪ್ಟೆರಾ (Lepidoptera) ಹಾಗೂ ಸ್ಫಿಂಗಿಡೇ (Sphingidae) ಕುಟುಂಬಕ್ಕೆ ಸೇರಿದ ಈ ಸುಂದರ ಪತಂಗವು ಹಸಿರು, ಆಲಿವ್ ಹಸಿರು, ಕಂದು ಹಾಗೂ ಗುಲಾಬಿ ಛಾಯೆಗಳ ಎಲೆಗಳಂತಿರುವ ರೆಕ್ಕೆಗಳ ವಿನ್ಯಾಸದಿಂದ ವಿಶೇಷ ಆಕರ್ಷಣೆ ಹೊಂದಿದೆ.
ಸುಮಾರು 9 ರಿಂದ 13 ಸೆಂ.ಮೀ. ವಿಸ್ತಾರದ ರೆಕ್ಕೆ ಹೊಂದಿರುವ ಈ ಪತಂಗವು ಭಾರತ ಸೇರಿದಂತೆ ಏಷ್ಯಾ ಮತ್ತು ಆಫ್ರಿಕಾದ ಉಷ್ಣವಲಯ ಪ್ರದೇಶಗಳಲ್ಲಿ ಕಂಡುಬರುತ್ತದೆ.
ಒಲಿಯಾಂಡರ್ ಹಾಕ್ಮಾತ್ನ ಮರಿಹುಳು ಮತ್ತು ವಯಸ್ಕ ಪತಂಗದ ಆಹಾರ ಪದ್ಧತಿ ವಿಭಿನ್ನವಾಗಿದೆ. ಮರಿಹುಳು (Caterpillar) ಮುಖ್ಯವಾಗಿ ಕನಿಗಿಲೆ/ಒಲಿಯಾಂಡರ್ (Nerium oleander) ಸಸ್ಯದ ಎಲೆಗಳನ್ನು ಆಹಾರವಾಗಿ ಸೇವಿಸುತ್ತದೆ. ಆದರೆ ವಯಸ್ಕ ಪತಂಗವು ಎಲೆಗಳನ್ನು ತಿನ್ನುವುದಿಲ್ಲ. ತನ್ನ ಉದ್ದವಾದ ಪ್ರೋಬೋಸಿಸ್ (Proboscis) ಮೂಲಕ ವಿವಿಧ ಹೂಗಳ ಮಕರಂದ (Nectar) ಹೀರುತ್ತದೆ.
ವಿಶೇಷವಾಗಿ ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಚಟುವಟಿಕೆಯಿಂದಿರುವ ಈ ಪತಂಗವು ಹೂವಿನಿಂದ ಹೂವಿಗೆ ಸಂಚರಿಸುವ ಮೂಲಕ ಕೆಲವು ಸಸ್ಯಗಳಿಗೆ ರಾತ್ರಿಕಾಲೀನ ಪರಾಗಸ್ಪರ್ಶಕ (Nocturnal Pollinator)ವಾಗಿಯೂ ಕಾರ್ಯನಿರ್ವಹಿಸುತ್ತದೆ.
ಹೀಗಾಗಿ ಇದು ಪರಿಸರದ ಜೀವವೈವಿಧ್ಯ ಹಾಗೂ ಸಸ್ಯಗಳ ಸಂತಾನೋತ್ಪತ್ತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಈ ಪತಂಗದ ಮತ್ತೊಂದು ವಿಶೇಷತೆ ಎಂದರೆ ಅದರ ರೆಕ್ಕೆಗಳ ಮೇಲಿರುವ ಎಲೆಗಳಂತಿರುವ ಹಸಿರು ವಿನ್ಯಾಸ. ಈ ನೈಸರ್ಗಿಕ ಕ್ಯಾಮೊಫ್ಲಾಜ್ (Camouflage) ಸಾಮರ್ಥ್ಯದಿಂದ ಹಸಿರು ಎಲೆಗಳ ನಡುವೆ ಕುಳಿತಾಗ ಶತ್ರುಗಳಿಗೆ ಸುಲಭವಾಗಿ ಕಾಣಿಸಿಕೊಳ್ಳುವುದಿಲ್ಲ. ಇದು ಪ್ರಕೃತಿಯ ಅದ್ಭುತ ರಕ್ಷಣಾ ವ್ಯವಸ್ಥೆಯ ಒಂದು ಉತ್ತಮ ಉದಾಹರಣೆಯಾಗಿದೆ ಎಂದು
ಜೀವಶಾಸ್ತ್ರ ಉಪನ್ಯಾಸಕಿ ಎಚ್.ಎಸ್ ಅಂಬಿಕಾ ಅವರು ಈ ಪತಂಗದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ.
ಅಪರೂಪವಾಗಿ ಮನೆಗಳ ಸುತ್ತಮುತ್ತ ಕಾಣಿಸಿಕೊಳ್ಳುವ ಈ ಪತಂಗವನ್ನು ಸುರಕ್ಷಿತವಾಗಿ ಅದರ ಸ್ವಾಭಾವಿಕ ಪರಿಸರಕ್ಕೆ ಬಿಡುವುದು ಉತ್ತಮ ಎಂದು ಪ್ರಕೃತಿ ತಜ್ಞರು ಸಲಹೆ ನೀಡಿದ್ದು, ಇಂತಹ ಜೀವಿಗಳ ಸಂರಕ್ಷಣೆಗೆ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.
