ಕೊಳ್ಳೇಗಾಲ: ಸಮಾಜದಲ್ಲಿ ಈಗಲೂ ಜಾತೀಯತೆ, ಅಸಮಾನತೆ, ದೌರ್ಜನ್ಯ, ಅತ್ಯಾಚಾರಗಳು ನಡೆಯುತ್ತಿದೆ, ಇವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾಧ್ಯಮಗಳು ಕೆಲಸ ಮಾಡಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಕರೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಸಂವಿಧಾನದಡಿ ಪ್ರತಿಯೊಬ್ಬರಿಗೂ ಸಮಾನ ಅವಕಾಶ ದೊರೆತಿದೆ ಆದರೂ ಅಸಮಾನತೆ,ದೌರ್ಜನ್ಯ ನಡೆಯುತ್ತಲೇ ಇದೆ ಎಂದು ವಿಷಾದಿಸಿದರು.
ಪ್ರಸ್ತುತ ಪತ್ರಿಕೋದ್ಯಮ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪತ್ರಿಕೆಗಳಿಗೆ ನಾಗರೀಕ ಸಮಾಜದಲ್ಲಿ ಗೌರವವಿದೆ. ಭಾರತೀಯರೆಲ್ಲರೂ ಒಂದೇ ಎಂದು ಹೇಳುತ್ತೇವೆ. ಸಂವಿಧಾನದಡಿ ಸ್ಥಾಪಿತವಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಮಾಧ್ಯಮಗಳು ಶ್ರಮಿಸಬೇಕು ಎಂದು ಹೇಳಿದರು.
ಕೊಳ್ಳೇಗಾಲ ತಾಲೂಕು ಪತ್ರಕರ್ತರು ನಿವೇಶನ, ಲ್ಯಾಪ್ ಟಾಪ್ ವಿತರಿಸಲು ಮನವಿ ಮಾಡಿದ್ದೀರಿ, ಈ ಬಗ್ಗೆ ಕ್ರಮ ವಹಿಸಲಾಗುತ್ತದೆ. ಪತ್ರಕರ್ತರ ಭವನ ನಿರ್ಮಾಣಕ್ಕೆ ಅನುದಾನ ನೀಡಿ ಪೂರ್ಣಗೊಳಿಸಲಾಗುತ್ತದೆ ಎಂದು ಶಾಸಕರು ಭರವಸೆ ನೀಡಿದರು.
ಮಾಜಿ ಶಾಸಕ ಆರ್.ನರೇಂದ್ರ ಅವರು ಪತ್ರಕರ್ತರ ಸಂಘದ ಸದಸ್ಯರ ಕೈಪಿಡಿ ಬಿಡುಗಡೆ ಮಾಡಿದರು.
ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಎನ್.ಸಿದ್ದಲಿಂಗಸ್ವಾಮಿ ಅವರು ದಿಕ್ಸೂಚಿ ಭಾಷಣ ಮಾಡಿ, ಸಂಘದ ಚಟುವಟಿಕೆ ಬಗ್ಗೆ ವಿವರಿಸಿದರು.
ಅಧ್ಯಕ್ಷ ಚಿಕ್ಕಮಾಳಿಗೆ ಹಾಗೂ ಸಂಘದ ಪದಾಧಿಕಾರಿಗಳು ತಾಲೂಕು ಪತ್ರಕರ್ತರ ಭವನ ಕಾಮಗಾರಿಗೆ ಅನುದಾನ ನೀಡಿ ಕಟ್ಟಡ ಪೂರ್ಣಗೊಳಿಸುವುದರ ಜತೆಗೆ ಪತ್ರಕರ್ತರಿಗೆ ನಿವೇಶನ ಮತ್ತು ಲ್ಯಾಪ್ ಟ್ಯಾಪ್ ವಿತರ ಣೆಯನ್ನು ಮಾಡಬೇಕೆಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ಭಿನ್ನ ವತ್ತಳೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಡಿ. ನಟರಾಜು, ನಿರ್ದೇಶಕರಾದ ಎಸ್.ರಾಜಶೇಖರ್, ಎಂ. ಮರಿಸ್ವಾಮಿ, ಮಲ್ಲಪ್ಪ ಯಡದೊರೆ, ಎಚ್.ಕೆ ವಿಜಯಾ ಮಹೇಶ, ದತ್ತಿ ಪ್ರಶಸ್ತಿ ಪುರಸ್ಕೃತ ಸಿ.ಬಸಂತ್ ಕುಮಾರ್, ಪತ್ರಿಕಾ ವಿತರಕರಾದ ಕುಶಾಲ್, ಗಿರೀಶ್ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿ ಸಾಧನೆ ಮಾಡಿರುವ ತಾಲೂಕು ಸಂಘದ ಸದಸ್ಯ ಪಿ.ಮಹೇಶ ಅವರ ಪುತ್ರ ಎಂ.ವಂಶಿತ್ ಅವರನ್ನು ಸನ್ಮಾನಿಸಿ ಗೌರವಿ ಸಲಾಯಿತು.
ಈ ಸಂದರ್ಭದಲ್ಲಿ ತಹಸಿಲ್ದಾರ್ ಐ.ಇ ಬಸವರಾಜು, ಡಿವೈಎಸ್ಪಿ ಜೆ.ಮೋಹನ್, ತಾಲೂಕು ಪಂಚಾ ಯಿತಿ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಕುಮಾರ್, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಎಸ್.ಲಕ್ಕೂರು, ರಾಜ್ಯ ಸಮಿತಿ ಸದಸ್ಯ ಸಿ.ಮಹೇಂದ್ರ, ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಎನ್.ನಟರಾಜು, ಮಾಜಿ ಅಧ್ಯಕ್ಷ ಡಿ.ಸಿದ್ಧರಾಜು, ನಿರ್ದೇಶಕರು, ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಂಘ -ಸಂಸ್ಥೆಗಳ ಮುಖಂಡರು ಹಾಜರಿದ್ದರು.
