ಮೈಸೂರು: ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡುವ ನಿಟ್ಟಿನಲ್ಲಿ ಮೈಸೂರು ಮಹಾನಗರ ಪಾಲಿಕೆಯ ವಲಯ ಕಚೇರಿ-7ರ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆ ನಡೆಸಲಾಯಿತು.
ದಾವೂದ್ಖಾನ್ ರಸ್ತೆಯ ಫೈವ್ ಲೈಟ್ ವೃತ್ತದಿಂದ ಅಶೋಕ ರಸ್ತೆಯವರೆಗಿನ ಪ್ರಮುಖ ರಸ್ತೆಗಳಲ್ಲಿ ಅಂಗಡಿಗಳ ವಸ್ತುಗಳು, ಬ್ಯಾನರ್, ಫ್ಲೆಕ್ಸ್ ಮತ್ತು ಇತರೆ ವಸ್ತುಗಳನ್ನು ಇಟ್ಟು ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿದ್ದು ಅದನ್ನೆಲ್ಲಾ ತೆರವುಗೊಳಿಸಲಾಯಿತು.
ಕಾರ್ಯಾಚರಣೆ ವಲಯ ಕಚೇರಿ-7 ರ ಅಭಿವೃದ್ಧಿ ಅಧಿಕಾರಿ ಮತ್ತು ವಲಯ ಆಯುಕ್ತರ ನೇತೃತ್ವದಲ್ಲಿ ನಡೆಯಿತು. ಅವರಿಗೆ ಮಹಾನಗರ ಪಾಲಿಕೆಯ ಇಂಜಿನಿಯರ್ ಶಾಖೆ, ಆರೋಗ್ಯ ಶಾಖೆ ಹಾಗೂ ಸ್ಥಳೀಯ ಪೊಲೀಸ್ ಸಿಬ್ಬಂದಿ ಸಾಥ್ ನೀಡಿದರು.
ಮಂಗಳವಾರ ಬೆಳಗ್ಗೆ ಆರಂಭವಾದ ಕಾರ್ಯಾಚರಣೆ ವೇಳೆ ಪಾದಚಾರಿ ಮಾರ್ಗದ ಮೇಲೆ ಇರಿಸಿದ್ದ ಟೇಬಲ್, ಕುರ್ಚಿ, ವಸ್ತುಗಳ ರಾಶಿ, ಜಾಹೀರಾತು ಫಲಕಗಳನ್ನು ಜೆಸಿಬಿ ಮತ್ತು ಕಾರ್ಮಿಕರ ನೆರವಿನಿಂದ ತೆರವುಗೊಳಿಸಲಾಯಿತು. ಒತ್ತುವರಿ ಮಾಡಿಕೊಂಡಿದ್ದ ಅಂಗಡಿ ಮಾಲೀಕರಿಗೆ ಮೊದಲೇ ನೋಟಿಸ್ ನೀಡಲಾಗಿತ್ತು. ಆದರೂ ತೆರವು ಮಾಡದ ಹಿನ್ನೆಲೆಯಲ್ಲಿ ಪಾಲಿಕೆಯ ಸಿಬ್ಬಂದಿ ವಸ್ತುಗಳನ್ನು ವಶಕ್ಕೆ ಪಡೆದರು.
ಈ ಸಂದರ್ಭದಲ್ಲಿ ಆಯುಕ್ತರು ಮಾತನಾಡಿ, ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿರುವುದರಿಂದ ಪಾದಚಾರಿಗಳು ರಸ್ತೆಯ ಮೇಲೆ ಸಂಚರಿಸುವಂತಾಗಿದೆ, ಇದರಿಂದ ಅಪಘಾತಗಳು ಸಂಭವಿಸುತ್ತಿವೆ. ಸಾರ್ವಜನಿಕರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಈ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಮುಂದೆಯೂ ನಿಯಮ ಮೀರಿ ಪಾದಚಾರಿ ಮಾರ್ಗದಲ್ಲಿ ವಸ್ತುಗಳನ್ನು ಇಟ್ಟರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ತೆರವು ಕಾರ್ಯಾಚರಣೆ ಬಳಿಕ ಪಾದಚಾರಿ ಮಾರ್ಗ ಸಂಪೂರ್ಣ ಮುಕ್ತವಾಗಿದ್ದು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ಮಹಿಳೆಯರು ಸಮಾಧಾನ ವ್ಯಕ್ತಪಡಿಸಿದರು.
ಮಹಾನಗರ ಪಾಲಿಕೆಯು ಮುಂದಿನ ದಿನಗಳಲ್ಲಿ ನಗರದ ಇತರೆ ವಲಯಗಳಲ್ಲಿಯೂ ಇದೇ ಮಾದರಿಯಲ್ಲಿ ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆಯನ್ನು ಮುಂದುವರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
