ಕೊಳ್ಳೇಗಾಲ: ತೈಲ ಬೆಲೆ ಏರಿಕೆ ಹಾಗೂ ಜೆಸಿಬಿ ಯಂತ್ರಗಳ ನಿರ್ವಹಣಾ ವೆಚ್ಚ ಹೆಚ್ಚಳದ ಹಿನ್ನೆಲೆಯಲ್ಲಿ ಕೊಳ್ಳೇಗಾಲ ಪಟ್ಟಣದಲ್ಲಿ ಜೆಸಿಬಿ ಮಾಲೀಕರು ಸಭೆ ನಡೆಸಿ ಮಹತ್ವದ ಚರ್ಚೆ ನಡೆಸಿದರು.
ಸಭೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಡೀಸೆಲ್ ಬೆಲೆ, ಯಂತ್ರಗಳ ಬಿಡಿಭಾಗಗಳ ದರ, ದುರಸ್ತಿ ವೆಚ್ಚ, ವಿಮೆ, ಕಾರ್ಮಿಕರ ವೇತನ ಸೇರಿದಂತೆ ವಿವಿಧ ಖರ್ಚುಗಳು ಹೆಚ್ಚಾಗುತ್ತಿವೆ. ಇದರಿಂದ ಜೆಸಿಬಿ ಯಂತ್ರಗಳನ್ನು ನಿರ್ವಹಿಸುವುದು ಮಾಲೀಕರಿಗೆ ಆರ್ಥಿಕವಾಗಿ ಸವಾಲಾಗುತ್ತಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.
ನಿರ್ಮಾಣ ಕಾಮಗಾರಿಗಳು, ರಸ್ತೆ ಕಾಮಗಾರಿಗಳು, ಕೃಷಿ ಸಂಬಂಧಿತ ಕೆಲಸಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಜೆಸಿಬಿ ಯಂತ್ರಗಳ ಸೇವೆ ಅಗತ್ಯವಾಗಿದ್ದು, ಗ್ರಾಹಕರಿಗೆ ನಿರಂತರ ಹಾಗೂ ಉತ್ತಮ ಸೇವೆ ನೀಡಲು ವೆಚ್ಚಕ್ಕೆ ಅನುಗುಣವಾಗಿ ದರ ಪರಿಷ್ಕರಣೆ ಮಾಡುವುದು ಅನಿವಾರ್ಯವಾಗಿದೆ ಎಂದು ಮಾಲೀಕರು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಜೆಸಿಬಿ ಮಾಲೀಕರು, ಪ್ರಸ್ತುತ ಪರಿಸ್ಥಿತಿಯನ್ನು ಗ್ರಾಹಕರು ಅರ್ಥಮಾಡಿಕೊಂಡು ಪರಿಷ್ಕೃತ ಬಾಡಿಗೆ ದರಗಳಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಹೆಚ್ಚುತ್ತಿರುವ ವೆಚ್ಚಗಳ ನಡುವೆಯೂ ಗುಣಮಟ್ಟದ ಸೇವೆ ನೀಡಲು ಮಾಲೀಕರು ಬದ್ಧರಾಗಿದ್ದು, ಗ್ರಾಹಕರು ಮತ್ತು ಮಾಲೀಕರ ನಡುವೆ ಉತ್ತಮ ಸಹಕಾರ ಇರಬೇಕು ಎಂದು ತಿಳಿಸಿದರು.
ಈ ಸಭೆಯಲ್ಲಿ ಜೆಸಿಬಿ ಮಾಲೀಕರ ಸಂಘದ ಅಧ್ಯಕ್ಷರಾದ ಆರ್. ಮಹದೇವ, ಪ್ರಧಾನ ಕಾರ್ಯದರ್ಶಿ ಸಿದ್ದೇಶ, ಗೌರವಾಧ್ಯಕ್ಷ ಮಲ್ಲರಾಜು, ಮಹದೇವ, ಮೊಹಮ್ಮದ್ ಅಯೂಬ್, ರಾಜಶೆಟ್ಟಿ, ಸಲಹೆಗಾರ ವೆಂಕಟೇಶ್ ಮೂರ್ತಿ, ಸಹಾಕಾರ್ಯದರ್ಶಿ ಮಹಮ್ಮದ್ ಸಲಿಮ್, ಖಜಾಂಚಿ ಎಂ.ಶಿವಕುಮಾರ್, ಸಂಘಟನಾ ಕಾರ್ಯದರ್ಶಿ ಆನಂದ್, ಗೋವಿಂದ, ರಾಮಕೃಷ್ಣ, ಸಿದ್ದಪ್ಪ, ಚಂದ್ರು, ಸುರೇಶ್, ಕಂದಸ್ವಾಮಿ, ಉಪಾಧ್ಯಕ್ಷರು ಶಿವಪ್ರಸಾದ್(ಮುದ್ದಣ್ಣ) ಮತ್ತಿತರರು ಪಾಲ್ಗೊಂಡಿದ್ದರು.
