ಬಿಡದಿ: ಬಿಡದಿ ಪ್ರದೇಶದಲ್ಲಿ ಸರ್ಕಾರ ಪ್ರಸ್ತಾಪಿಸಿರುವ ರೈತ ವಿರೋಧಿ ಟೌನ್ಶಿಪ್ ಯೋಜನೆಯನ್ನು ಕೈಬಿಡಬೇಕೆಂದು ಆಗ್ರಹಿಸಿ ನಡೆಯುತ್ತಿರುವ ರೈತರ ಐತಿಹಾಸಿಕ 490ನೇ ದಿನದ ಹೋರಾಟಕ್ಕೆ ಕನ್ನಡಾಂಬೆ ರಕ್ಷಣಾ ವೇದಿಕೆ ಬೆಂಬಲ ವ್ಯಕ್ತಪಡಿಸಿ ಹೋರಾಟದಲ್ಲಿ ಪಾಲ್ಗೊಂಡಿತು.
ಕನ್ನಡಾಂಬೆ ರಕ್ಷಣಾ ವೇದಿಕೆ ಅಧ್ಯಕ್ಷ ರಾಜಶೇಖರ್ ನೇತೃತ್ವದಲ್ಲಿ ಬಹಳಷ್ಟು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಅಭಿವೃದ್ಧಿ ಹೆಸರಿನಲ್ಲಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಕಸಿದುಕೊಳ್ಳುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಸುಮಾರು 8,500 ಎಕರೆ ಫಲವತ್ತಾದ ಕೃಷಿ ಭೂಮಿ, 1.5 ಲಕ್ಷಕ್ಕೂ ಹೆಚ್ಚು ತೆಂಗಿನ ಮರಗಳು, 1.5 ಲಕ್ಷಕ್ಕೂ ಹೆಚ್ಚು ಅಡಿಕೆ ಮರಗಳು ಹಾಗೂ ಒಟ್ಟು 8 ಲಕ್ಷಕ್ಕೂ ಹೆಚ್ಚು ವಿವಿಧ ಗಿಡ-ಮರಗಳು ನಾಶವಾಗುವಂತಹ ಈ ಯೋಜನೆ ಪರಿಸರ ಹಾಗೂ ರೈತರ ಬದುಕಿಗೆ ಮಾರಕ ಮತ್ತು ರಾಜ್ಯದ ಆಹಾರ ಭದ್ರತೆಗೆ ದೊಡ್ಡ ಹೊಡೆತವಾಗಿದೆ ಎಂದು ರಾಜಶೇಖರ್ ತಿಳಿಸಿದರು.
ಈ ಯೋಜನೆಯಿಂದ ಸಾವಿರಾರು ರೈತ ಕುಟುಂಬಗಳು ತಮ್ಮ ಜೀವನೋಪಾಯ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಆದ್ದರಿಂದ ಸರ್ಕಾರ ಕೂಡಲೇ ರೈತರ ಪರವಾಗಿ ನಿಂತು ಈ ಯೋಜನೆಯನ್ನು ಹಿಂತೆಗೆದುಕೊಳ್ಳಬೇಕು.
ವಿಶೇಷವಾಗಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ತವರು ಜಿಲ್ಲೆಯಲ್ಲೇ ರೈತರಿಗೆ ಅನ್ಯಾಯವಾಗುತ್ತಿರುವುದು ಅತ್ಯಂತ ವಿಷಾದನೀಯ.
ರೈತರ ಭಾವನೆಗಳಿಗೆ ಗೌರವ ನೀಡಿ, ಅವರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಈ ರೈತ ವಿರೋಧಿ ಯೋಜನೆಯನ್ನು ರದ್ದುಪಡಿಸಬೇಕು ಎಂದು ಕನ್ನಡಾಂಬೆ ರಕ್ಷಣಾ ವೇದಿಕೆ ಒತ್ತಾಯಿಸಿತು.
ಈ ಸಂದರ್ಭದಲ್ಲಿ ಮೈಸೂರು ಹೃದಯವಂತ ಕನ್ನಡಿಗರ ಬಳಗದ ಅಧ್ಯಕ್ಷ ಡಿ.ಪಿ.ಕೆ. ಪರಮೇಶ್, ಕನ್ನಡಾಂಬೆ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆ ಜಿ. ತಾರ, ಮೈಸೂರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹರೀಶ್ , ಕರ್ನಾಟಕ ರಾಜ್ಯ ರೈತ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಕರಿಗೌಡ , ಕುಮಾರ್, ಶಿವಲಿಂಗಯ್ಯ ಸೇರಿದಂತೆ ನೂರಾರು ರೈತ ಮುಖಂಡರು, ಹೋರಾಟಗಾರರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹೋರಾಟದಲ್ಲಿ ಭಾಗವಹಿಸಿ ರೈತರಿಗೆ ಬೆಂಬಲ ಸೂಚಿಸಿದರು.
490 ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಹೋರಾಟ ರೈತರ ಹಕ್ಕು, ಭೂಮಿ ಮತ್ತು ಭವಿಷ್ಯವನ್ನು ಉಳಿಸುವ ಹೋರಾಟವಾಗಿದೆ. ಸರ್ಕಾರ ರೈತರ ಸಹನೆಯನ್ನು ಪರೀಕ್ಷಿಸದೆ, ಕೂಡಲೇ ರೈತರೊಂದಿಗೆ ಮಾತುಕತೆ ನಡೆಸಿ ನ್ಯಾಯಯುತ ಪರಿಹಾರ ಕಂಡುಕೊಳ್ಳಬೇಕು. ಇಲ್ಲವಾದರೆ ರಾಜ್ಯಾದ್ಯಂತ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಕನ್ನಡಾಂಬೆ ರಕ್ಷಣಾ ವೇದಿಕೆ ಅಧ್ಯಕ್ಷ ರಾಜಶೇಖರ್ ಎಚ್ಚರಿಸಿದ್ದಾರೆ.
