ಕೊಳ್ಳೇಗಾಲ: ಕರ್ನಾಟಕ ರಕ್ಷಣಾ ವೇದಿಕೆ (ಟಿ ಎ ನಾರಾಯಣ ಗೌಡರ ಬಣ) ಕೊಳ್ಳೇಗಾಲ ತಾಲ್ಲೂಕು ಘಟಕದ ಕಚೇರಿಯನ್ನು ಜಿಲ್ಲಾಧ್ಯಕ್ಷ ಹೆಚ್ ಎನ್ ಮಂಜೇಶ್ ಗುರುವಾರ ಉದ್ಘಾಟಿಸಿದರು.
ಪಟ್ಟಣದ ಆರ್ಎಂಸಿ ಬಳಿ ಇರುವ ಕಚೇರಿಯನ್ನು ಕರವೇ ಜಿಲ್ಲೆಯ ವಿವಿಧ ಘಟಗಳ ಪದಾಧಿಕಾರಿಗಳೊಡನೆ ಉದ್ಘಾಟಿಸಿ, ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.
ಕನ್ನಡ ನಾಡು ನುಡಿ ಜಲ ಸಂರಕ್ಷಣೆಗೆ ಕರ್ನಾಟಕ ರಕ್ಷಣಾ ವೇದಿಕೆ ಸದಾ ಸಿದ್ಧವಾಗಿದ್ದು ರಾಜ್ಯದ್ಯಕ್ಷರಾದ ಟಿ.ಎ ನಾರಾಯಣಗೌಡ ಅವರು ಕಳೆದ ಒಂದುವರೆ ತಿಂಗಳ ಹಿಂದೆ ಮೆಹಬೂಬ್ ಫಾಷ ಅವರನ್ನು ಕೊಳ್ಳೇಗಾಲ ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಜವಾಬ್ದಾರಿ ವಹಿಸಿದ್ದಾರೆ. ಜವಾಬ್ದಾರಿ ವಹಿಸಿದ ಅಲ್ಪ ಕಾಲದಲ್ಲಿಯೇ ಮೆಹಬೂಬ್ ಪಾಷ ಅವರು ಪಟ್ಟಣದಲ್ಲಿ ಕಚೇರಿ ತೆರೆದು ಕನ್ನಡ ನಾಡು ನುಡಿ ಸೇವೆಗೆ ಸಿದ್ದರಾಗಿದ್ದಾರೆ ಜಿಲ್ಲೆಯ ಸಮಸ್ತ ಕನ್ನಡಿಗರ ಪರವಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಲಿದ್ದೇವೆ ಎಂದು ತಿಳಿಸಿದರು.
ಕರವೇ ಘಟಕವನ್ನು ಸಂಘಟಿಸಿ ನಾಡು, ನುಡಿ, ಭಾಷೆ ನೆಲ, ಜಲ ರಕ್ಷಣೆಗಾಗಿ ಹೋರಾಟ ಮಾಡುವಂತೆ ಅವರಿಗೆ ಸಲಹೆಯನ್ನು ನೀಡಲಾಗಿದೆ, ಮುಂದಿನ ದಿನಗಳಲ್ಲಿ ಅವರ ಹೋರಾಟಕ್ಕೆ ಎಲ್ಲರು ಒಗ್ಗಟ್ಟಾಗಿ ಬೆಂಬಲಿಸುತ್ತೇವೆ ಎಂದು ಹೇಳಿದರು.
ಕಾವೇರಿ ಮೇಕೆದಾಟು ಯೋಜನೆ ನಮ್ಮ ನಾಡಿನ ಕನಸಾಗಿದ್ದು ತಮಿಳು ನಾಡು ಸರ್ಕಾರ ಮೇಕೆದಾಟು ಯೋಜನೆಗೆ ತಡೆಯೊಡ್ದುತ್ತಿದೆ ಆದ್ದರಿಂದ ಕೇಂದ್ರ ಸರ್ಕಾರ ತಮಿಳುನಾಡು ಸರ್ಕಾರದ ಅರ್ಜಿಯನ್ನು ತಿರಸ್ಕರಿಸಿ ಮೇಕೆದಾಟು ಯೋಜನೆಗೆ ಆದಷ್ಟು ಬೇಗ ಅನುಮೋದನೆಯನ್ನು ನೀಡಬೇಕೆಂದು ಒತ್ತಾಯಿಸಿ ಕೊಳ್ಳೇಗಾಲ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಗುವುದು ಅದಕ್ಕಾಗಿ ನಮ್ಮ ರಾಜ್ಯಾಧ್ಯಕ್ಷರ ಸಹಕಾರ ಕೋರಿದ್ದು ಅವರು ಅನುಮತಿ ನೀಡಿದ ಕೂಡಲೇ ಹೋರಾಟ ನಡೆಸಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯ ಕಮಲ್ ನಾಗರಾಜು,ನಿವೃತ್ತ ರೈಲ್ವೆ ಇಲಾಖೆ ನೌಕರ ಜೆ.ನಿಂಗರಾಜು, ಕರವೇ ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ, ಕಾರ್ಯದರ್ಶಿ ಅಸಾದ್, ಸಂಚಾಲಕ ಮಹೇಶ್, ಮಹಿಳಾ ಘಟಕ ಜಿಲ್ಲಾ ಅಧ್ಯಕ್ಷೆ ಭಾಗ್ಯಲಕ್ಷ್ಮಿ, ಉಪಾಧ್ಯಕ್ಷೆ ಸಾಕಮ್ಮ, ಟೌನ್ ಅಧ್ಯಕ್ಷೆ ಸುಮಾ, ಕೊಳ್ಳೇಗಾಲ ತಾಲ್ಲೂಕು ಅಧ್ಯಕ್ಷ ಮೆಹಬೂಬ್ ಪಾಷ, ಸಂಘಟನಾ ಕಾರ್ಯದರ್ಶಿ ಇರ್ಫಾನ್ ಆಲಿಖಾನ್, ಸಹ ಕಾರ್ಯದರ್ಶಿ ಮೊಹಮ್ಮದ್ ಜಾಬಿರ್, ತೌಶೀಫ್ ಬೇಗ್, ಜಾವಾದ್ ಪಾಷ, ಯಳಂದೂರು ಟೌನ್ ಅಧ್ಯಕ್ಷ ಮಹೇಂದ್ರ, ತಾಲ್ಲೂಕು ಅಧ್ಯಕ್ಷ ಮಹಾದೇವಸ್ವಾಮಿ, ಉಪಾಧ್ಯಕ್ಷ ಇಸ್ಮಾಯಿಲ್, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ಸಂತೋಷ್ ಮತ್ತಿತರರು ಹಾಜರಿದ್ದರು.
