ಕೊಳ್ಳೇಗಾಲ,ಜುಲೈ.1: ಕೊಳ್ಳೇಗಾಲ ಪಟ್ಟಣದಲ್ಲಿ ಮೂರು ಸ್ಥಳಗಳಲ್ಲಿ ಪ್ರತ್ಯೇಕವಾಗಿ ನಿರ್ಮಿಸಲಾಗಿರುವ ತಾತ್ಕಾಲಿಕ ಸಂಚಾರಿ ಪೊಲೀಸ್ ಚೌಕಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ಮುತ್ತುರಾಜು ಅವರು ಇಂದು ಉದ್ಘಾಟಿಸಿದರು.
ಪಟ್ಟಣದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ಬರುವ ಎಡಿಬಿ ವೃತ್ತ, ಬಸ್ತಿಪುರ ವೃತ್ತ ಹಾಗೂ ಬಸ್ ನಿಲ್ದಾಣದ ಬಳಿ ನಿರ್ಮಿಸಲಾಗಿರುವ ಚೌಕಿಗಳನ್ನು ಮುತ್ತುರಾಜು ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೊಳ್ಳೇಗಾಲ ಪಟ್ಟಣದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸಂಚಾರಿ ಪೊಲೀಸ್ ಚೌಕಿಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ವಿವಿಧ ಠಾಣೆಗಳಿಂದ ಆರು ಮಂದಿ ಸಿಬ್ಬಂದಿಗಳನ್ನು ಸಂಚಾರಿ ನಿಯಂತ್ರಣ ಕರ್ತವ್ಯಕ್ಕೆ ನಿಯೋಜಿಸಿಕೊಳ್ಳಲಾಗಿದೆ. ಈ ಸಿಬ್ಬಂದಿಗಳು ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಸಿಬ್ಬಂದಿ ಗಳನ್ನು ಹೆಚ್ಚು ನಿಯೋಜಿಸಲಾಗುವುದು ಎಂದು ಹೇಳಿದರು.
ಅಲ್ಲಿಯವರೆಗೆ ವಿವಿಧ ಠಾಣೆಗಳಿಂದ ನಿಯೋಜಿಸಲಾಗಿರುವ ಮುಖ್ಯಪೇದೆಗಳಾದ ಶಿವಪ್ರಸಾದ್ ನಾಯಕ, ದ್ವಾರಕೀಶ್ ಸಚಿನ್ ಕುಮಾರ್, ಸಿದ್ದಪ್ಪ ಬುಳ್ಳುಂಡಗಿ,ಪ ಉ ಪ್ರವಾರ, ವೆಂಕಟೇಶ್ ಅವರುಗಳು ಕಾರ್ಯನಿರ್ವಹಿಸಲಿದ್ದಾರೆ. ಜಿಲ್ಲೆಗೆ 50 ಮಂದಿ ಪೊಲೀಸ್ ಸಿಬ್ಬಂದಿಗಳ ನೇಮಕಾತಿ ಮಾಡಲಾಗಿದೆ. ಈ ನೇಮಕಾತಿ ವೇಳೆ ಸಂಚಾರಿ ವಿಭಾಗಕ್ಕೆ ಸಿಬ್ಬಂದಿಗಳನ್ನು ಹೆಚ್ಚಿಸಲಾಗುವುದು ಎಂದು ಹೇಳಿದರು.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಉಪವಿಭಾಗ ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನ ಬೆಟ್ಟ ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ದೇವಸ್ಥಾನ, ಶಿವನಸಮುದ್ರ ಸಾಮೂಹಿಕ ದೇವಾಲಯಗಳ ಧಾರ್ಮಿಕ ತಾಣ, ಹೊಗೇನಕಲ್ ಫಾಲ್ಸ್, ಭರಚುಕ್ಕಿ ಫಾಲ್ಸ್ ಸೇರಿದಂತೆ ಇನ್ನಿತರ ಧಾರ್ಮಿಕ ಹಾಗು ಪ್ರವಾಸಿ ತಾಣಗಳನ್ನು ಒಳಗೊಂಡಿದೆ. ಹಾಗಾಗಿ ಕೊಳ್ಳೇಗಾಲ ಪಟ್ಟಣ ಈ ಎಲ್ಲಾ ಸ್ಥಳಗಳಿಗೂ ಸಂಪರ್ಕ ಕೊಂಡಿಯಾಗಿರುವುದರಿಂದ ಇಲ್ಲಿಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಹಾಗೂ ಹೊರ ರಾಜ್ಯಗಳಿಂದ ಸಾವಿರಾರು ವಾಹನಗಳು ಬಂದು ಹೋಗುವುದರಿಂದ ವಾಹನ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ಪಟ್ಟಣದಲ್ಲಿ ಅಪಘಾತಗಳು ಹೆಚ್ಚುತ್ತಿವೆ ಆದ್ದರಿಂದ ಸದ್ಯಕ್ಕೆ ತಾತ್ಕಾಲಿಕವಾಗಿ 6 ಜನ ಸಿಬ್ಬಂದಿಗಳನ್ನು ಅವರಿಗೆ ಸಂಚಾರಿ ನಿಯಮದ ಬಗ್ಗೆ ತರಬೇತಿ ನೀಡಿ, ಸಂಚಾರಿ ಪೊಲೀಸರ ಸಮವಸ್ತ್ರ ನೀಡಿ ಕರ್ತವ್ಯ ನಿರ್ವಹಿಸಲು ನಿಯೋಜಿಸಲಾಗಿದೆ ಎಂದು ಮುತ್ತುರಾಜು ವಿವರಿಸಿದರು.
ಕೊಳ್ಳೇಗಾಲ ಪಟ್ಟಣಕ್ಕೆ ಸಂಚಾರಿ ಪೊಲೀಸ್ ಠಾಣೆ ಅಗತ್ಯವಿದ್ದು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಸರ್ಕಾರ ಅನುಮತಿ ನೀಡಿಲ್ಲ ಹಾಗಾಗಿ ಕೊಳ್ಳೇಗಾಲ ಪಟ್ಟಣಕ್ಕೆ ಶಾಶ್ವತ ಸಂಚಾರಿ ಪೊಲೀಸ್ ಠಾಣೆಗೆ ಮರು ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಮಂಜೂರಾತಿ ನೀಡಿದರೆ ಶಾಶ್ವತ ಸಂಚಾರಿ ಪೊಲೀಸ್ ಠಾಣೆಯನ್ನು ಮಾಡ ಬಹುದು ಎಂದು ತಿಳಿಸಿದರು.
ಪಟ್ಟಣದ ಪ್ರತಿಷ್ಠಿತ ಶಾಲೆಗಳ ಮುಂದೆ ಪೋಲಿ ಪುಂಡರ ಹಾವಳಿ ಹೆಚ್ಚಾಗುತ್ತಿದೆ ಹಾಗೂ ಇದೇ ವೇಳೆ ಐ ಬಿ ರಸ್ತೆಯಲ್ಲಿ ವಿಃಲಿಂಗ್ ಮಾಡುವವರ ಉಪಟಳ ಮಿತಿ ಮೀರಿದೆ ಎಂಬ ಸುದ್ದಿಗಾರರ ದೂರಿಗೆ ಪ್ರತಿಕ್ರಿಯಿಸಿದ ವರಿಷ್ಠಾಧಿಕಾರಿಗಳು ಅಲ್ಲಿಗೆ ಸಿಬ್ಬಂದಿ ನಿಯೋಜಿಸುವಂತೆ ಹಾಗೂ ವಿಃಲಿಂಗ್ ಮಾಡುವವರ ವಿರುದ್ಧ ಟಿಕಾಯ್ ಆಪರೇಷನ್ ಮಾಡುವಂತೆ ಡಿ ವೈ ಎಸ್ ಪಿ ಮೋಹನ್ ಜೆ ರವರಿಗೆ ಸೂಚಿಸಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿಪಟ್ಟಣ ಹಾಗೂ ಗ್ರಾಮಾಂತರ ಠಾಣೆ ಪಿಎಸ್ಐ ಗಳು ಹಾಗೂ ಸಿಬ್ಬಂದಿ ಹಾಜರಿದ್ದರು.

